ಬೆಂಗಳೂರು : ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್ ಅವರು ಜೆಡಿಎಸ್ ವರಿಷ್ಠರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿರುವ ಸಂಘಟನಾ ಸಭೆಗೂ ಮುನ್ನ ಆಕ್ರೋಶ ಹೊರ ಹಾಕಿದ ಅವರು, ನನಗೆ ಯಾರ ಮೇಲೂ ಪ್ರೀತಿ, ದ್ವೇಷ ಇಲ್ಲ. ಜೆಡಿಎಸ್ ನಲ್ಲಿ ನನ್ನ ಸ್ವಾಭಿಮಾನಕ್ಕೆ ಈವರೆಗೂ ಧಕ್ಕೆ ಆಗಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೆ ನಾನು ಸಹಿಸಲಾರೆ ಎಂದರು.
ದೇವೇಗೌಡರು, ಕೃಷ್ಣಪ್ಪರನ್ನು ನಾನೇ ಸೋಲಿಸಿದ್ದು ಎಂದು ಹೇಳಿದ್ದಾರೆ. ದೊಡ್ಡವರೇ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನೆ ಇರಲು ಆಗುತ್ತಾ, ಪ್ರೀತಿಯಿಂದ ಹೇಳಿದರೆ ಕೇಳುತ್ತೇನೆ. ಇಲ್ಲವೆಂದರೆ ಯಾಕೆ ಕೇಳಲಿ. ನಾನು ನನ್ನ ಅಪ್ಪನ ಮಾತನ್ನೇ ಕೇಳೋದಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಜೊತೆ ಮಾಧ್ಯಮಗೋಷ್ಠಿ ಸಮರ್ಥಿಸಿಕೊಂಡ ಶ್ರೀನಿವಾಸ್ , ಬ್ಯಾಂಕ್ನಲ್ಲಿ ಲೋನ್ ಕೊಡಿಸುವ ವಿಚಾರಕ್ಕೆ ರಾಜಣ್ಣ ಮನೆಗೆ ಹೋಗಿದ್ದೆ. ಆಗ ಅವರು ಮಾಧ್ಯಮಗೋಷ್ಠಿ ನಡೆಸಿದರು. ಆ ಸಂದರ್ಭದಲ್ಲಿ ನಾನು ಅಲ್ಲಿ ಇರಬೇಕಾಯಿತು. ಅದರಲ್ಲಿ ತಪ್ಪೇನಿದೆ, ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡಿದರೆ ನಾನು ಏನು ಮಾಡಲಿ. ಯಾರ ವಾಕ್ ಸ್ವಾತಂತ್ರ್ಯವನ್ನೂ ಕಟ್ಟಿ ಹಾಕಲು ಸಾಧ್ಯವಿಲ್ಲ. ಯಾರು ಯಾರ ಬಗ್ಗೆ ಬೇಕಾದರೂ ಮಾತನಾಡುತ್ತಾರೆ. ನಾನು ಬೇಡ ಅನ್ನಲು ಆಗುತ್ತಾ ಎಂದು ಹೇಳಿದರು.
ಓದಿ: ಪಕ್ಷ ವಿರೋಧಿ ಕೆಲಸ ಮಾಡಿಲ್ಲ.. ಕುಮಾರಸ್ವಾಮಿ ನಿಲುವಿಗೆ ಸ್ವಾಗತ; ಶಾಸಕ ಜಿ.ಟಿ. ದೇವೆಗೌಡ
ಯಾವ ಕೈ ನಾಯಕರ ಸಂಪರ್ಕದಲ್ಲೂ ಇಲ್ಲ
ನಾನು ಯಾವ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲೂ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಂಪರ್ಕದಲ್ಲೂ ಇಲ್ಲ. ಇನ್ನು ಪರಮೇಶ್ವರ್ ಅವರನ್ನು ಕಾಲೇಜ್ ಅಡ್ಮಿಷನ್ ವಿಚಾರವಾಗಿ ಭೇಟಿ ಮಾಡಿದ್ದೆ ಎಂದು ಸಮರ್ಥಿಸಿಕೊಂಡರು.
ಯಾವ ಪಕ್ಷದವರೂ ನನ್ನನ್ನು ಬೆಳೆಸಿಲ್ಲ:
ನನ್ನನ್ನು ಯಾವ ನಾಯಕರು ಬೆಳೆಸಿಲ್ಲ. ನಮ್ಮ ಅಪ್ಪ ನನ್ನನ್ನು ಬೆಳೆಸಿದ್ದಾರೆ ಎಂದ ಅವರು, ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಹಿರಂಗವಾಗಿ ನಾನು ನಾಯಕರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರೇ ನನ್ನ ಬಗ್ಗೆ ಮಾತನಾಡಿದ್ದಾರೆ. ಮನುಷ್ಯರಾದವರಿಗೆ ಬೇಜಾರು ಆಗುತ್ತದೆ. ಆತ್ಮ ಸಾಕ್ಷಿ ಇದ್ದವರಿಗೆ ಖಂಡಿತ ಬೇಜಾರು ಆಗುತ್ತದೆ. ಸತ್ಯ ಹೇಳೋದೇ ದೊಡ್ಡ ಸಮಸ್ಯೆ ಆಗಿದೆ ಎಂದರು.