ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ತಮ್ಮ ಅಭಿಮಾನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಬೇಕೆಂಬ ಕೋರಿಕೆಯೊಂದಿಗೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಕೋಡಿದೊಡ್ಡಿ ಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇಲ್ಲಿನ ನಿವಾಸಿ ಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಅಭಿಮಾನಿಯ ಈ ಕೋರಿಕೆ ಈಡೇರಿಸಲು ಸಿದ್ದರಾಮಯ್ಯ ಅವರು ಇಂದು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಮೈಸೂರು ಪ್ರವಾಸ...
ಸಿದ್ದರಾಮಯ್ಯ ಇಂದಿನಿಂದ ಮೂರು ದಿನ ಮೈಸೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1.30 ಕ್ಕೆ ಬೆಂಗಳೂರಿನಿಂದ ಹೊರಟು ಮಾರ್ಗಮಧ್ಯೆ ಯುವಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಅವರು ಮೈಸೂರಿಗೆ ತೆರಳಿ ಸಂಜೆ 4:30 ಕ್ಕೆ ತೊಣಚಿಕೊಪ್ಪಲು ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಅವರು ನಾಳೆ ಬೆಳಗ್ಗೆ ಕೆ ಆರ್ ನಗರ ತಾಲೂಕಿನ ಗಂಧನಹಳ್ಳಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4:30 ಕ್ಕೆ ಹುಣಸೂರಿಗೆ ಭೇಟಿ ಕೊಡಲಿರುವ ಸಿದ್ದರಾಮಯ್ಯ ಅಲ್ಲಿ ಶಾಸಕರ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿಂದ ವಾಪಸ್ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಬೆಳಗ್ಗೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪತ್ರಿಕಾ ಛಾಯಾಗ್ರಾಹಕರ ಸಂಘವನ್ನು ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12:30ಕ್ಕೆ ಪಿರಿಯಾಪಟ್ಟಣಕ್ಕೆ ತೆರಳಲಿದ್ದು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರನ್ನು ಸನ್ಮಾನಿಸಲಿದ್ದಾರೆ. ಸಂಜೆ 7 ಗಂಟೆಗೆ ಮೈಸೂರಿನಿಂದ ಹೊರಟು ರಾತ್ರಿ ಬೆಂಗಳೂರು ತಲುಪಲಿದ್ದಾರೆ.