ಬೆಂಗಳೂರು: ಮಣ್ಣಿನ ಮಕ್ಕಳಿಂದ ಕಾವೇರಿಗೆ ದ್ರೋಹ ಆಗಿರೋದು ಅಂತ ಹೇಳಿದ್ದಾರೆ. ಎರಡು ವರ್ಷ ಸಿಎಂ ಆಗಿ ಮನೆಗೆ ಹೋಗುವಾಗ ಸಂಬಳ ಕೊಡಲು ವೆಸ್ಟ್ ಬೆಂಗಾಲ್ ಪಿಯರ್‌ಲೆಸ್‌ನಿಂದ ಸಾಲ ತಂದು ರಾಜ್ಯವನ್ನು ಅಡ ಇಟ್ಟ ಮಹಾನುಭಾವ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ನಿನ್ನೆಯ ದಿನ ನೆಲಮಂಗಲದಲ್ಲಿ ರಾಜ್ಯದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದಾರೆ. ಓಹೋ ಇವರು ಕವಿಸರ್ವೋತ್ತೋಮರು, ರಾಮಾಯಣದ ಮಹಾನ್ವೇಷಣೆ ಮಾಡಿದವರು. ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು?. ದೇವೇಗೌಡರನ್ನು ಸೋಲಿಸಿ ಮನೆಗೆ ಕಳಿಸಿದ್ರಲ್ಲ ಇವರ ಕೊಡುಗೆ ಏನು?. ಇವರಿಂದ ಹೇಳಿಸಿಕೊಳ್ಳಬೇಕಾ ನಾವು. ಪಾಪ ಅವರನ್ನು ಕರೆಸಿ ಕೂರಿಸಿಕೊಂಡು ಸಲಹೆ ಪಡೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದರು.
ನಮ್ಮ ಕುವೆಂಪುಗಿಂತ ಮೇಲ್ದರ್ಜೆಯ ಮಹಾನ್ವೇಷಣೆ ಮಾಡಿದವರಲ್ಲವೇ?. ಅಂತಹ ಮಹಾನುಭಾವರನ್ನು ಇಟ್ಕೊಂಡು ನಾವೇನು ಸಲಹೆ ಕೊಡೋದು. ಇವತ್ತು ನಮ್ಮನ್ನು ಕರೆದು ಏನ್ ಸಲಹೆ ಕೇಳುತ್ತಿರೀ, ನಮ್ಮ ಅವಶ್ಯಕತೆ ಇಲ್ಲ, ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವನಿಂದ ಏನೇನಾಯ್ತು. ಧರ್ಮಸಿಂಗ್ ಅವರಿಗೆ ದಾರಿ ತಪ್ಪಿಸಿದ್ದ ಈ ವ್ಯಕ್ತಿಯನ್ನು ಇಟ್ಟುಕೊಳ್ಳಿ ಎಂದು ಕಿಡಿಕಾರಿದರು.
ಈ ಸರ್ಕಾರಕ್ಕೆ ನಾಡಿನ ಜನರ ಹಿತರಕ್ಷಣೆಯ ತಿಳುವಳಿಕೆಯೂ ಇಲ್ಲ. ತಾಕತ್ತು ಇಲ್ಲ, ಧಮ್ಮು ಇಲ್ಲ. ಬೆಂಗಳೂರಿಗೆ ಕುಡಿಯುವ ನೀರು ಎಲ್ಲಿಂದ ತಂದು ಕೊಡುತ್ತಾರೆ ಎಂದು ಪ್ರಶ್ನಿಸಿದರು. ತಮಿಳುನಾಡಿನಲ್ಲಿ ಎಷ್ಟು ಎಕರೆ ಬೆಳೆ ಬೆಳೆದಿದ್ದಾರೆ, ಎಷ್ಟು ನೀರು ಬಿಟ್ರು ಅಂತ ಅಲ್ಲಿ ಮನದಟ್ಟು ಮಾಡಬೇಕಲ್ಲವೆ?. ಹಿಂದೆ ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಬೋರ್ಡ್ ಮಾಡುವಾಗ ಪ್ರತಿಭಟಿಸಿದ್ದೇವೆ. ಸಂಕಷ್ಟದ ಬಗ್ಗೆ ತೀರ್ಮಾನ ಮಾಡದೆ ಪದೇ ಪದೆ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಆಗುತ್ತಿದೆ. ನನಗೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಿಲ್ಲ. ಹದಿನೈದು ದಿನಗಳ ಹಿಂದೆಯೇ ಹಾಸನ ಕಾರ್ಯಕ್ರಮ ನಿಗದಿಯಾಗಿತ್ತು. ನಾನು ಇವತ್ತು ಸರ್ವಪಕ್ಷ ಸಭೆಗೆ ಭಾಗಿಯಾಗಿಲ್ಲ ಎಂದು ಹೇಳಿದರು.
ಜಲ ನಿಯಂತ್ರಣ ಸಮಿತಿ ನಿರ್ದೇಶನ ಆಘಾತಕಾರಿ - ಹೆಚ್ಡಿಕೆ: ಮತ್ತೊಂದೆಡೆ, ನಿತ್ಯವೂ ನೆರೆ ರಾಜ್ಯಕ್ಕೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಮಿತಿ (CWRC) ಕೊಟ್ಟಿರುವ ನಿರ್ದೇಶನ ಆಘಾತಕಾರಿ. ಯಾವ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಅವರು, ಸಂಕಷ್ಟ ಸೂತ್ರವೇ ಇಲ್ಲ, ಕರ್ನಾಟಕಕ್ಕಷ್ಟೇ ಸಂಕಷ್ಟವೇ?. ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ. ಆದೇಶ ಪಾಲನೆಗಷ್ಟೇ ಕರ್ನಾಟಕ, ಅನುಭವಿಸಲಿಕ್ಕೆ ತಮಿಳುನಾಡು. ಹೀಗಿದೆ ನಮ್ಮ ಸ್ಥಿತಿ. ಆ ರಾಜ್ಯವು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದೆ ಎಂಬ ಅಂಕಿ-ಅಂಶದ ಬಗ್ಗೆ ಪ್ರಾಧಿಕಾರದಲ್ಲಿ ಚರ್ಚಿಸಿಲ್ಲ ಎನ್ನುವುದಕ್ಕೆ ಆ ಪ್ರಾಧಿಕಾರದ ಆದೇಶವೇ ಸಾಕ್ಷಿ ಎಂದಿದ್ದಾರೆ.