ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪಕ್ಷದ ಶಾಸಕರ ಕ್ಷೇತ್ರದ ಸಮಸ್ಯೆಗಳ ವಿಚಾರ ಸಂಬಂಧ ಮಾತುಕತೆ ನಡೆಸಲು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಯಡಿಯೂರಪ್ಪರವರ ಜೊತೆ 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಶಾಸಕರ ಕ್ಷೇತ್ರದ ಸಮಸ್ಯೆ, ಅನುದಾನ ಬಿಡುಗಡೆ ಕುರಿತು ಚರ್ಚೆ ನಡೆಸಿದ ನಂತರ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಅನೌಪಚಾರಿಕ ಮಾತುಕತೆ ನಡೆಸಿದರು ಎನ್ನಲಾಗ್ತಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೆಚ್ಚು ಹಾನಿ ಉಂಟಾಗುತ್ತಿದೆ. ವಿಶೇಷವಾಗಿ ನಮ್ಮ ದಾಸರಹಳ್ಳಿ ಶಾಸಕ ಮಂಜುನಾಥ್ ಕ್ಷೇತ್ರದಲ್ಲಿ ಬಹಳ ಹಾನಿ ಆಗಿತ್ತು. ನಾನು ಸಿಎಂ ಆಗಿದ್ದಾಗ ಅನುದಾನ ಕೊಟ್ಟಿದ್ದೆ, ಅದ್ರೆ ಅದು ಬಿಡುಗಡೆ ಆಗಿರಲಿಲ್ಲ. ಅದರ ಬಗ್ಗೆ ಕೂಡಾ ಮನವಿ ಮಾಡಲು ಬಂದಿದ್ದೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಡ್ರಗ್ಸ್ ವಿಚಾರ ಕೂಡಾ ಹೆಚ್ಚು ಸದ್ದು ಮಾಡುತ್ತಿದ್ದು, ತನಿಖೆ ನಡೆಯುತ್ತಿದೆ ಅಂತಾ ಸಿಎಂ ಹೇಳಿದ್ದಾರೆ. ಬೇರೆ-ಬೇರೆ ಕ್ಷೇತ್ರದವರು ಈ ಡ್ರಗ್ಸ್ ಜಾಲದಲ್ಲಿ ಇರಬಹುದು. ಈ ಜಾಲದಲ್ಲಿ ಯಾರೇ ಭಾಗಿಯಾಗಿದ್ದರೂ ಸಹ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಡಿಕೆ ಒತ್ತಾಯಿಸಿದರು.
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಆಗುತ್ತಿರುವ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಂತರ ದಾಸರಹಳ್ಳಿ ಶಾಸಕ ಮಂಜುನಾಥ್ ಮಾತನಾಡಿ, ಮಳೆಯಿಂದಾಗಿ ನನ್ನ ಕ್ಷೇತ್ರದಲ್ಲಿ ಹೆಚ್ಚು ಹಾನಿ ಆಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ರು, ಆದ್ರೆ ಸರ್ಕಾರ ಬದಲಾದಾಗ ಅನುದಾನ ಬಿಡುಗಡೆಗೆ ಸ್ವಲ್ಪ ತೊಂದರೆ ಆಗಿತ್ತು. ಪೀಣ್ಯ ಕೈಗಾರಿಕಾ ಪ್ರದೇಶ ಕೂಡಾ ನಮ್ಮ ಕ್ಷೇತ್ರಕ್ಕೆ ಬರುತ್ತದೆ. ಮಳೆಯಿಂದಾಗಿ ಅಲ್ಲೂ ಸಮಸ್ಯೆ ಆಗಿದೆ. ಆದಾಯ ಬರುವ ಕ್ಷೇತ್ರವಾಗಿದ್ದರಿಂದ ಆದಷ್ಟು ಬೇಗ ಗಮನ ಹರಿಸುವಂತೆ ಮನವಿ ಮಾಡಿದ್ದೇವೆ ಎಂದರು.