ಬೆಂಗಳೂರು : ಕೋವಿಡ್ ನೆಪವೊಡ್ಡಿ ಹಣವಿಲ್ಲ ಅನ್ನೋ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮೀಸಲಿಟ್ಟ 71 ಸಾವಿರ ಕೋಟಿ ರೂ. ಏನಾಯ್ತು? ಹಣ ಹೊಡೆದಿದ್ದಾರಾ? ಎಂದು ಜೆಡಿಎಸ್ ಸದಸ್ಯ ರಮೇಶ್ ಗೌಡ ಪ್ರಶ್ನಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಅವ್ಯವಹಾರ ಜಗಜ್ಜಾಹೀರಾಗಿದೆ. ಬಜೆಟ್ನಲ್ಲಿ ಈ ಹಣ ಬಳಕೆಯ ಯಾವುದೇ ಮಾಹಿತಿ ನೀಡಿಲ್ಲ. ಈಗ ಮತ್ತೆ ಹಣ ಮೀಸಲಿಟ್ಟಿದೆ.
ಯಾವುದಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ಸೂಚಿಸಿಲ್ಲ. ಲೋಕಾಯುಕ್ತ ಬಲ ತುಂಬುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದ ವಿಚಾರವನ್ನು ಬಿಜೆಪಿ ಮರೆತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಲೂಟಿ ತಡೆಯಲು ಲೋಕಾಯುಕ್ತಕ್ಕೆ ಜೀವ ತುಂಬಬೇಕಿದೆ. ಅಧಿಕಾರಿಗಳ ಭ್ರಷ್ಟಾಚಾರ ಮಿತಿ ಮೀರಿದೆ. ಒಬ್ಬ ಸಮರ್ಥ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಿಸಿ ಎಂದು ಸಲಹೆ ಇತ್ತರು.
ಕೋವಿಡ್-19 ವಾರಿಯರ್ಗಳಿಗೆ ಸರ್ಕಾರ ಗೌರವ ನೀಡಿಲ್ಲ. ಮೃತ ಕೊರೊನಾ ವಾರಿಯರ್ಗಳಿಗೆ 30 ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದಿದ್ದರು. ಯಾರಿಗೆ ಸಿಕ್ಕಿದೆ? ಆ್ಯಂಬುಲೆನ್ಸ್ಗೆ ಪರ್ಯಾಯವಾಗಿ 500 ಟೆಂಪೊ ಟ್ರಾವೆಲರ್ ಬಾಡಿಗೆಗೆ ಪಡೆದರು. ಅವರಿಗೆ ಹಣ ನೀಡಿಲ್ಲ. ಅವರು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು.
ಭ್ರಷ್ಟಾಚಾರ ಮಾಡುವವರು ಯಾರೇ ಇರಲಿ, ತಾವು ಆ ಸ್ಥಾನದಲ್ಲಿ ಕುಳಿತವರು ಒಂದಿಷ್ಟು ಆದೇಶ ಹೊರಡಿಸಬೇಕು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶ ಮಾಡಿ, ಬಜೆಟ್ ಮೇಲಿನ ಚರ್ಚೆ ಸಂದರ್ಭ ಕೋವಿಡ್ ವಿಚಾರವಾಗಿ ನಡೆದ ಚರ್ಚೆಯನ್ನೇ ಮಾಡುವ ಬದಲು, ಬಜೆಟ್ ಮೇಲೆ ಮಾತನಾಡಿ ಎಂದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಸದಸ್ಯರ ಕಾಳಜಿ ಗಮನಿಸಿ. ಸಾಕಷ್ಟು ಪ್ರಮಾಣದಲ್ಲಿ ರೋಗ ಹೆಚ್ಚುತ್ತಿದೆ. ಕಾಳಜಿಯ ಮೇಲೆ ಈ ಮಾತನ್ನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಓದಿ:ಆನ್ಲೈನ್ ಶಿಕ್ಷಣದಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ: ತಜ್ಞರ ವರದಿ ಪಾಲನೆಗೆ ಬದ್ಧವೆಂದ ಸುರೇಶ್ ಕುಮಾರ್
ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದೆ. ಇದರ ನಿಯಂತ್ರಣ ಹೇಗೆ? ಈಗ ಹೊಸದಾಗಿ ಟೆಂಪೊ ಟ್ರಾವೆಲರ್ ಬೇಕು ಎನ್ನುತ್ತಿದ್ದಾರೆ. ಹೇಗೆ ವಾಹನ ಸಿಗಲಿದೆ. ಹಿಂದಿನವರಿಗೆ ಹಣ ನೀಡಿಲ್ಲ. ಕೆಪಿಎಸ್ಸಿ ಅವ್ಯವಹಾರ ಹೆಚ್ಚಾಗಿದೆ. ಜಾತಿ ಆಧಾರದ ಮೇಲೆ ಆಯ್ಕೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಮಂದಿಗೆ ಉದ್ಯೋಗ ಕೊಡುತ್ತೇನೆ ಎಂದಿದ್ದರು. ಆದರೆ, ಇಷ್ಟು ವರ್ಷದಲ್ಲಿ ಕನಿಷ್ಠ ಎರಡು ಸಾವಿರ ಮಂದಿಗೆ ಕೆಲಸ ಕೊಟ್ಟಿಲ್ಲ.
ಈ ಬಜೆಟ್ನಲ್ಲಿ ಉದ್ಯೋಗ ಸೃಷ್ಟಿಗೆ ಏನಾದರೂ ಕ್ರಮಕೈಗೊಳ್ಳಬಹುದಿತ್ತು. ಆದರೆ, ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಹೊಸ ಉದ್ಯೋಗ ಸೃಷ್ಟಿ ಇರಲಿ, ಖಾಲಿ ಹುದ್ದೆ ಭರ್ತಿಗೆ ಕ್ರಮಕೈಗೊಂಡಿಲ್ಲ. ಶಿಕ್ಷಕರ ಕೊರತೆ ನಿವಾರಿಸಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎನ್ನುತ್ತೀರಿ. ಇದೆಲ್ಲಾ ಸಾಧ್ಯವೇ? ಎಂದರು.
ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಬಾಗಮನೆ ಟೆಕ್ ಪಾರ್ಕ್ನಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ನೀಡಲಾಗಿತ್ತು. ಅನೇಕ ಕಂಪನಿಗಳು ಮುಚ್ಚಿವೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡವರು ಮನೆ ಖಾಲಿ ಮಾಡಿದ್ದಾರೆ. ಇಂದು ಮನೆ ಮಾಲೀಕರಿಗೆ ಆಗುವ ನಷ್ಟಕ್ಕೆ ಯಾರು ಜವಾಬ್ದಾರಿ? ಎಂದರು.