ಬೆಂಗಳೂರು: ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ಮಾಡಿದಂತೆ ನಟಿಸಿ ಹಣ ಪೀಕಿದ್ದ ಪ್ರಕರಣದಲ್ಲಿ ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರು ಅಮಾನತುಗೊಂಡಿದ್ದಾರೆ. ಸದಾಶಿವನಗರ ಪಿಎಸ್ಐ ಮೋಹನ್ ಬಸವರಾಜು, ಎಸ್ಬಿ ಕಾನ್ಸ್‌ಟೇಬಲ್ ಶಿವಕುಮಾರ್, ಕ್ರೈಂ ಸ್ಟಾಫ್ ಪರಶುರಾಮ್, ನಾಗರಾಜ್ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ.
ತಮ್ಮದಲ್ಲದ ವ್ಯಾಪ್ತಿಯಾದ ಸಹಕಾರ ನಗರದಲ್ಲಿ ಬುಕ್ಕಿಗಳೆಂದು ಉದ್ಯಮಿ ಯೋಗೇಶ್ ಎಂಬುವರನ್ನು ಬೆದರಿಸಿ ಶಿವಕುಮಾರ್ ಮೂರು ಲಕ್ಷ ರೂ. ಹಣ ಪಡೆದಿದ್ದರು. ಈ ವಿಚಾರದ ಬಗ್ಗೆ ಯೋಗೇಶ್ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರಿಗೆ ಲಿಖಿತ ದೂರು ನೀಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ದೂರಿನ ತನಿಖೆ ನಡೆಸಿದ ಯಲಹಂಕ ಎಸಿಪಿ ವರದಿ ನೀಡಿದ್ದು, ವರದಿ ಆಧಾರದ ಮೇಲೆ ಐವರನ್ನು ಅಮಾನತು ಮಾಡಲಾಗಿದೆ. ಸಹಕಾರ ನಗರದ ಉದ್ಯಮಿಯೊಬ್ಬರಿಗೆ ಬೆಟ್ಟಿಂಗ್ ವಿಚಾರವಾಗಿ ಬಂಧಿಸುತ್ತೇವೆ ಎಂದು ಸದಾಶಿವನಗರ ಪೊಲೀಸ್ ಸಿಬ್ಬಂದಿ ಬೆದರಿಸಿ ಹಣ ಪೀಕಿರುವುದು ವರದಿಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲೋಹರ್ಡಗಾ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ.. ಇಬ್ಬರು ಪೊಲೀಸರೇ ಆರೋಪಿಗಳು