ಬೆಂಗಳೂರು: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಸುದ್ದಿಗೊಷ್ಠಿ ನಡೆಸಿದ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಲು ಕೋವಿಡ್ ಉಸ್ತುವಾರಿ ಹೊತ್ತಿರುವ ಪಂಚ ಸಚಿವರು ತುರ್ತು ಜಂಟಿ ಸುದ್ದಿಗೊಷ್ಠಿ ಕರೆದಿದ್ದಾರೆ.
ವಿಧಾನಸೌಧದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ತುರ್ತು ಸುದ್ದಿಗೊಷ್ಠಿಯಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭಾಗವಹಿಸಲಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಠಡಿಯಲ್ಲಿ ಪ್ರತ್ಯೇಕ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊರೊನಾ ಉಸ್ತುವಾರಿ ಹೊತ್ತಿರುವ ಐವರು ಸಚಿವರು ಉಪಸ್ಥಿತರಿದ್ದರು. ಸಚಿವ ಸಂಪುಟ ಸಭೆ ನಂತರ ಸಚಿವ ಶ್ರೀರಾಮುಲು ಮನೆಗೆ ಹೊರಟರಾದರೂ ಸಿಎಂ ಸೂಚನೆ ಮೇರೆಗೆ ಮತ್ತೆ ವಾಪಸ್ ಬಂದು ಸಭೆಯಲ್ಲಿ ಭಾಗಿಯಾದರು. ಸಭೆಯಲ್ಲಿ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಎಲ್ಲಾ ಆರೋಪಗಳಿಗೂ ತಕ್ಕ ಉತ್ತರ ನೀಡಿ, ದಾಖಲೆಗಳ ಮೂಲಕ ಸುದ್ದಿಗೊಷ್ಠಿ ನಡೆಸಿ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.