ಬೆಂಗಳೂರು: ಇಂದು ನಡೆದ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದರು. ಈ ವೇಳೆ, ರಾಹುಲ್ ಗಾಂಧಿ ಮಾತನಾಡಿ, ರಾಜ್ಯದ ಜನತೆಗೆ ನಾನು ಹೃದಯದಿಂದ ಹಾಗೂ ಪಕ್ಷದಿಂದ ಧನ್ಯವಾದ ಅರ್ಪಿಸುತ್ತೇನೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದೀರಿ. ಕಳೆದ ಐದು ವರ್ಷದಿಂದ ಬಿಜೆಪಿ ಅರಾಜಕತೆ ನೋಡಿದ್ದೀರಿ. ಗೆಲುವಿಗೆ ಒಂದೇ ಕಾರಣ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ನಿಂತಿದೆ ಎಂದರು.
ಬಿಜೆಪಿ ಬಳಿ ಎಲ್ಲ ವಿಧದ ಪ್ರಭಾವ ಇತ್ತು. ಅವರ ಎಲ್ಲಾ ಶಕ್ತಿಯನ್ನು ರಾಜ್ಯದ ಜನ ಸೋಲಿಸಿದ್ದೀರಾ. ಅವರ ಭ್ರಷ್ಟಾಚಾರ, ದ್ವೇಷವನ್ನು ಜನ ಸೋಲಿಸಿದ್ದಾರೆ. ದ್ವೇಷ ಮುಗಿಸಿ ಪ್ರೀತಿ ಹುಟ್ಟಿಸಿದ್ದೇವೆ. ಐದು ವರ್ಷ ಭ್ರಷ್ಟಾಚಾರ ಸಹಿಸಿದ್ದೀರಿ. ನಾವು ಐದು ಭರವಸೆ ಕೊಟ್ಟಿದ್ದೆವು. ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಘೋಷಿಸಿದ್ದೆವು. ನಾವು ಸುಳ್ಳು ಆಶ್ವಾಸನೆ ಕೊಟ್ಟವರಲ್ಲ. ನುಡಿದಂತೆ ನಡೆಯುತ್ತೇವೆ. ಕೆಲ ಗಂಟೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅಲ್ಲಿ ಕಾನೂನಾಗಿ ಬರಲಿದೆ. ಆಡಿದ್ದನ್ನು ಮಾಡಿ ತೋರಿಸುತ್ತೇವೆ. ಎಲ್ಲರ ಅಭಿವೃದ್ಧಿ ನಮ್ಮ ಆಶಯ. ನಾವು ನಿಮಗೆ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಆಶ್ವಾಸನೆ ಕೊಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲರು ಸಿಎಂ, ಡಿಸಿಎಂ ಜತೆ ಸಚಿಚರಾಗಿ ಸಚಿವರಾಗಿ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಡಾ. ಜಿ.ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ ಮತ್ತು ಕೆ.ಜೆ.ಜಾರ್ಜ್ ಪ್ರಮಾಣವಚನ ಸ್ವೀಕರಿಸಿದರು.
40 ಸಾವಿರ ಮಂದಿಗೆ ಸಮಾರಂಭ ವೀಕ್ಷಿಸಲು ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ತಮ್ಮ ನೆಚ್ಚಿನ ನಾಯಕರು ಅಧಿಕಾರ ವಹಿಸಿಕೊಂಡ ಸಂದರ್ಭ ಘೋಷಣೆ ಕೂಗಿ ಸಂಭ್ರಮಿಸಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ಎಲ್ಲರಿಗೂ ಒಳಬರಲು ಅವಕಾಶ ಸಿಗಲಿಲ್ಲ. ಸಾಕಷ್ಟು ಮಂದಿ ನಿರಾಶರಾಗಿ ಹಿಂತಿರುಗಿದರು.
ಒಳಬಂದ ಅಭಿಮಾನಿಗಳು ಸಮಾರಂಭವನ್ನು ಕಣ್ತುಂಬಿಕೊಂಡರು. ಸಿದ್ದರಾಮಯ್ಯ ವೇದಿಕೆ ಮೇಲೆ ಆಗಮಿಸಿ ಕೈಬೀಸಿದ ಸಂದರ್ಭ ಕೆಲ ಸಮಯ ಕಾಲ ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಹಾಗೂ ಡಿಕೆಶಿ ಕೈಹಿಡಿದು ಎತ್ತಿದಾಗ ಅಭಿಮಾನಿಗಳ ಕೇಕೆ ಮುಗಿಲು ಮುಟ್ಟಿತ್ತು.
ಗಣ್ಯರ ಸಾಲಿನಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ, ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹೋಟ್, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್, ಚತ್ತೀಸ್‌ಗಡ ಸಿಎಂ ಭೂಪೇಶ್ ಬಫೇಲ್, ಹಿಮಾಚಲ ಪ್ರದೇಶ ಸಿಎಂ ಸುಖೀಂದರ್ ಸಿಂಗ್, ಪುದುಚೇರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಕಾಂಗ್ರೆಸ್ ನಾಯಕಿಮೆಹಬೂಬಾ ಮುಫ್ತಿ ಇದ್ದರು.
ಜೊತೆಗೆ ಚಿತ್ರನಟ ಡಾ. ಶಿವರಾಜ್ಕುಮಾರ್, ದುನಿಯಾ ವಿಜಯ್, ಗೀತಾ ಶಿವರಾಜ್ಕುಮಾರ್, ಸಾದು ಕೋಕೊಲಾ, ಮಾಜಿ ಸಚಿವೆ ಉಮಾಶ್ರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್ ಇದ್ದರೆ ಇನ್ನೊಂದೆ ಸಚಿವರಾಗಿ ಪದಗ್ರಹಣ ಮಾಡಿದ ಶಾಸಕರ ಜತೆ ಲಕ್ಷ್ಮಿಹೆಬ್ಬಾಳ್ಕರ್, ನಾಗೇಂದ್ರ, ಟಿ.ಬಿ. ಜಯಚಂದ್ರ, ಡಾ. ಎಂ. ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸಿದ್ದರಾಮಯ್ಯ - ಶಿವಕುಮಾರ್ ಸಂಪುಟದ ನೂತನ ಸಚಿವರ ಸಂಕ್ಷಿಪ್ತ ವಿವರ