ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಯುರ್ವೇದಿಕ್ ಮಸಾಜ್ ಸೆಂಟರ್ಗೆ ಬಂದು, ಥೆರಪಿಸ್ಟ್ ಕೈಕಾಲು ಕಟ್ಟಿ ಹಾಡಹಗಲೇ ಚಿನ್ನಾಭರಣ ದೋಚಿದ್ದ ಐವರು ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗುರು, ರುದ್ರೇಶ್, ಸಂದೀಪ್, ಪ್ರಭಾವತಿ ಹಾಗೂ ರೇಣುಕಾ ಬಂಧಿತ ಆರೋಪಿಗಳು.
ಜನವರಿ 14ರಂದು ಬೆಳಗ್ಗೆ 9.20ರ ಸುಮಾರಿಗೆ ಕೊಡಿಗೆಹಳ್ಳಿಯ ತಿಂಡ್ಲು ಸರ್ಕಲ್ನಲ್ಲಿರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ಗೆ ಬಂದಿದ್ದ ಆರೋಪಿಗಳು ಥೆರಪಿಸ್ಟ್ ಅನುಶ್ರೀ ಎಂಬುವರ ಕೈಕಾಲು ಕಟ್ಟಿ, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಆರೋಪಿಗಳ ಪೈಕಿ ರೇಣುಕಾ ಸಹ ಈ ಮೊದಲು ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಅನುಶ್ರಿಯೊಂದಿಗೆ ಪರಿಚಯವಿತ್ತು. ಆದರೆ ಮಾಡಿದ್ದ ಸಾಲ ಅತಿಯಾಗಿದ್ದರಿಂದ ಪ್ರಭಾವತಿ ಎಂಬುವಳೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದಳು. ಇದಕ್ಕಾಗಿ ತನ್ನ ಪತಿ ಗುರುನನ್ನು ಪ್ರಭಾವತಿಯೊಂದಿಗೆ ಒಟ್ಟುಗೂಡಿಸಿ ಸ್ನೇಹಿತೆ ಅನುಶ್ರೀಯನ್ನು ದರೋಡೆ ಮಾಡುವ ಕೆಲಸಕ್ಕೆ ಒಪ್ಪಿಸಿದ್ದಳು.
ಕೃತ್ಯಕ್ಕೆ ಒಂದು ದಿನ ಮುನ್ನವೇ ಮಾಹಿತಿ ಕೇಳುವ ಸೋಗಿನಲ್ಲಿ ಮಸಾಜ್ ಸೆಂಟರ್ಗೆ ಹೋಗಿದ್ದ ಆರೋಪಿಗಳು ಸಂಚು ರೂಪಿಸಿಕೊಂಡು ಬಂದಿದ್ದರು. ಜನವರಿ 14 ರಂದು ಬೆಳಗ್ಗೆ ಅನುಶ್ರೀ ಒಬ್ಬಳೇ ಇದ್ದಾಗ ಆರೋಪಿಗಳಾದ ಗುರು, ಪ್ರಭಾವತಿ, ರುದ್ರೇಶ್, ಸಂದೀಪ್ ಎರಡು ಪಲ್ಸರ್ ಬೈಕಿನಲ್ಲಿ ಸ್ಥಳಕ್ಕೆ ಬಂದಿದ್ದರು. ಆಯುರ್ವೇದಿಕ್ ಸೆಂಟರ್ಗೆ ಬಂದವಳೇ ದರದ ಬಗ್ಗೆ ಚರ್ಚಿಸಿದ್ದ ಪ್ರಭಾವತಿ, 'ತನ್ನ ಗಂಡ ಬಂದು ಹಣ ನೀಡುತ್ತಾರೆ' ಎಂದು ಆರೋಪಿ ಗುರುನನ್ನು ಒಳಗೆ ಕರೆಸಿಕೊಂಡಿದ್ದಳು. ಗುರು ಒಳಗೆ ಬಂದ ತಕ್ಷಣ ಆನ್‌ಲೈನ್ ಪೇಮೆಂಟ್ ಮಾಡುವುದಾಗಿ ಹೇಳಿ ತಕ್ಷಣ ಕೆಮಿಕಲ್ ಸಿಂಪಡಿಸಿದ್ದ ಕರ್ಚಿಫ್ ಅನ್ನ ಅನುಶ್ರೀಯ ಮುಖಕ್ಕೆ ಇಟ್ಟಿದ್ದ. ಬಳಿಕ ಆರೋಪಿಗಳು ಆಕೆಯ ಕೈ, ಕಾಲು ಕಟ್ಟಿ ಮೈ ಮೇಲಿದ್ದ ಮಾಂಗಲ್ಯ ಸರದ ಸಹಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಬಳಿಕ ಕೋಡಿಗೆಹಳ್ಳಿ ಠಾಣೆಗೆ ಅನುಶ್ರೀ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳಾದ ರೇಣುಕಾ, ಗುರು, ಪ್ರಭಾವತಿ, ರುದ್ರೇಶ್ ಹಾಗೂ ಸಂದೀಪ್ನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ: ನಿಧಾನವಾಗಿ ಕಾರು ಚಲಾಯಿಸುವಂತೆ ತಿಳಿಹೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ: ಆರೋಪಿಗಳ ಬಂಧನ