ಬೆಂಗಳೂರು: ಹಾಲಿ ಶಾಸಕರ ಹೆಸರುಗಳೂ ಸೇರಿದಂತೆ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಒಳಗೊಂಡ 120 ಮಂದಿಯ ಮೊದಲ ಪಟ್ಟಿ ಮುಂದಿನ ವಾರ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಕಳೆದ ವಾರ ನಗರದಲ್ಲಿ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆದಿದೆ. ಇವರಲ್ಲಿ ಗೆಲ್ಲುವ ಖಚಿತತೆ ಇರುವ ಹಾಗೂ ಒಬ್ಬರೇ ಅಭ್ಯರ್ಥಿಯನ್ನು ಅಂತಿಮಗೊಳಿಸಿ ಹೆಚ್ಚಿನ ಸ್ಪರ್ಧೆ ಇಲ್ಲದ ಕ್ಷೇತ್ರಗಳ ಉಮೇದುವಾರರ ಪಟ್ಟಿಯನ್ನು ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಒಟ್ಟಾಗಿ ಕುಳಿತು ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಇದೆ.
ಇನ್ನೆರಡು ದಿನಗಳಲ್ಲಿ ಈ ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆಗೆ ಕಳಿಸಿಕೊಡಲು ತೀರ್ಮಾನಿಸಲಾಗಿದೆ. ಮುಂದಿನ ವಾರಾಂತ್ಯದ ಒಳಗೆ ಕಾಂಗ್ರೆಸ್ ಪಕ್ಷದ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಭೆ, ಅಂತಿಮ ನಮನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕರು ಕಳೆದ ಎರಡು ದಿನಗಳಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆಯುತ್ತಿದ್ದ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ.
ಇಲ್ಲದಿದ್ದರೆ 120 ಅಭ್ಯರ್ಥಿಗಳ ಪಟ್ಟಿಯು ಸೋಮವಾರದೊಳಗೆ ಪಕ್ಷದ ಹೈಕಮಾಂಡ್ ನಾಯಕರನ್ನು ತಲುಪಬೇಕಿತ್ತು. ಸದ್ಯ ಸೋಮವಾರದ ಬಳಿಕ ಪಕ್ಷದ ರಾಷ್ಟ್ರೀಯ ನಾಯಕರು ಬುಲಾವ್ ನೀಡಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಪಟ್ಟಿಯೊಂದಿಗೆ ತೆರಳಲಿದ್ದಾರೆ. ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಈಗಾಗಲೇ ಮೊದಲ ಪಟ್ಟಿಯ ಅಭ್ಯರ್ಥಿಗಳನ್ನು ಒಳಗೊಂಡ ಮಾಹಿತಿಯೊಂದಿಗೆ ದೆಹಲಿಗೆ ತೆರಳಿದ್ದಾರೆ.
ವರಿಷ್ಠರ ಜೊತೆ ಡಿಕೆಶಿ ಚರ್ಚೆ: ಕೆಪಿಸಿಸಿ ಅಧ್ಯಕ್ಷರು ಒಂದಿಬ್ಬರು ಕಾರ್ಯಾಧ್ಯಕ್ಷರ ಜೊತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಸಭೆ ನಡೆಸಲಿದ್ದಾರೆ. ಎಲ್ಲರ ಸಮ್ಮತಿ ಪಡೆದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರ ಮತ್ತು ಬೇರೆ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಬಯಸುತ್ತಿರುವ ಅಭ್ಯರ್ಥಿಗಳ ವಿಚಾರವಾಗಿ ಇನ್ನೊಮ್ಮೆ ಸಭೆ ಸೇರಿ ಚರ್ಚಿಸುವ ನಾಯಕರು ಯುಗಾದಿ ಹಬ್ಬ ಕಳೆದ ಬಳಿಕ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೇ ತಿಂಗಳ ಕೊನೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಗೊಂದಲವಿರುವ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಯಿಸಿ ಸಮಾಲೋಚಿಸಿ ಒಮ್ಮತ ಮೂಡಿಸಿ ಎರಡನೇ ಪಟ್ಟಿ ಬಿಡುಗಡೆ ಮಾಡುವ ಚಿಂತನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿದ್ದಾರೆ.
ಮೂರನೇ ಪಟ್ಟಿ ಮಾಡುವ ಆಸ್ಪದ ಇಲ್ಲದಂತೆ ಎರಡನೇ ಪಟ್ಟಿಯಲ್ಲೇ ಎಲ್ಲವನ್ನೂ ಅಂತಿಮಗೊಳಿಸುವ ಚಿಂತನೆ ಇದೆ. ಈ ತಿಂಗಳ ಕೊನೆಯ ಒಳಗೆ ಎಲ್ಲ ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿಕೊಳ್ಳಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರಂತರವಾಗಿ ಅತೃಪ್ತರ ಸಂಪರ್ಕದಲ್ಲಿದ್ದು, ಸಂಧಾನ ಪ್ರಯತ್ನ ಮುಂದುವರೆಸಿದ್ದಾರೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿ, ಬಿಜೆಪಿಗಿಂತಲೂ ಮೊದಲೇ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ.
ಮೊದಲ ಪಟ್ಟಿ ಶೀಘ್ರ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಪ್ರಕಾರ, ಆದಷ್ಟು ಬೇಗ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಒಟ್ಟಾಗಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿದ್ದು ಸುಲಭವಾಗಿ ಗೆಲ್ಲುವ ಅವಕಾಶ ಇರುವ ಹಾಗೂ ಜನಪ್ರಿಯ ಶಾಸಕರು ಇಲ್ಲವೇ ಮಾಜಿ ಶಾಸಕರನ್ನು ಒಳಗೊಂಡ ಮೊದಲ ಪಟ್ಟಿ ಆದಷ್ಟು ಶೀಘ್ರ ಬಿಡುಗಡೆ ಆಗಲಿದೆ. ರಾಜ್ಯ ಕಾಂಗ್ರೆಸ್ ನಾಯಕರು ಜೊತೆ ಹೈಕಮಾಂಡ್ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್ನ ಮೊದಲ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಹೊಂದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಜಯಭೇರಿ ಬಾರಿಸುತ್ತದೆ : ನಳಿನ್ ಕುಮಾರ್ ಕಟೀಲ್