ಯಲಹಂಕ: ಮುಂಜಾನೆ 3-30ರ ಸಮಯದಲ್ಲಿ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ 15 ಎಂಜಿನಿಯರ್ಗಳಿಗೆ ಸುಟ್ಟು ಗಾಯಗಳಾಗಿವೆ.
ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯ ಅನಂತ್ಪುರ ಗೇಟ್ ಮುಂಭಾಗದ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಈ ಘಟನೆ ನಡೆದಿದೆ. 370 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಒಂದರ ಕಾರ್ಯಾಚರಣೆ ನಡೆಸುವ ವೇಳೆ ಈ ಅನಾಹುತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ 15 ಎಂಜಿನಿಯರ್ಗಳು ಗಾಯಗೊಂಡಿದ್ದು, ಗಾಯಾಳುಗಳನ್ನ ತಕ್ಷಣವೇ ಸಮೀಪದ ಕೊಲಂಬಿಯಾ ಏಷಿಯಾ, ಮಲ್ಲಿಗೆ, ರಾಮಯ್ಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಇನ್ನು ಈ ಗಾಯಾಳುಗಳಲ್ಲಿ ಕೆಪಿಸಿಎಲ್ನ 11, ಬಿಹೆಚ್ಇಎಲ್ ಹಾಗೂ ಜಿಇ ಕಂಪನಿಯ ತಲಾ ಇಬ್ಬರು ಎಂಜಿನಿಯರ್ಗಳಿದ್ದಾರೆ. ಗಾಯಾಗೊಂಡವರನ್ನು ಹೆಚ್.ಎನ್.ಶ್ರೀನಿವಾಸ್, ಕೃಷ್ಣಾ ಭಟ್, ಮನೋಜ್, ನಿತೀಶ್, ನರಸಿಂಹಮೂರ್ತಿ, ಹರೀಶ್, ಅಕುಲ್ ರಾಘುರಾಮ್, ಶ್ರೀನಿವಾಸ್, ಅಶೋಕ್, ಡಿ.ಪಿ.ಶ್ರೀನಿವಾಸನ್, ಮಂಜಪ್ಪ, ಅಶ್ವಥ್ ನಾರಾಯಣ್, ರವಿ ಕೆ.ಪಿ., ಬಾಲರಾಜ್ ಎಂದು ಗುರುತಿಸಲಾಗಿದೆ.
ಯಲಹಂಕ ಉಪನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.