ಬೆಂಗಳೂರು: ನಗರದ ಕಾಚರಕನಹಳ್ಳಿ ಕೊಳೆಗೇರಿ ಪ್ರದೇಶದಲ್ಲಿದ್ದ ಗುಡಿಸಲುಗಳು ಬೆಂಕಿಗಾಹುತಿಯಾದ ಪ್ರಕರಣದಲ್ಲಿ ಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸುವ ಸಂಬಂಧ ಮುಂದಿನ ಒಂದು ವಾರದಲ್ಲಿ ಸ್ಪಷ್ಟ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಸಂಬಂಧ ವಕೀಲೆ ವೈಶಾಲಿ ಹೆಗ್ಡೆ ಅವರು ಬರೆದ ಪತ್ರ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲ್ಗೋಳ ಪೀಠಕ್ಕೆ ಮಾಹಿತಿ ನೀಡಿ, ಗುಡಿಸಲು ಕಳೆದುಕೊಂಡಿರುವ ಕಾರ್ಮಿಕರಿಗೆ ಬದಲಿ ಜಾಗದಲ್ಲಿ ಸೂರು ಕಲ್ಪಿಸಿಕೊಡಲು ಪ್ರಯತ್ನಿಸುತ್ತಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಕಾರ್ಮಿಕರ ಪರ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ, ಕರ್ನಾಟಕ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಕಾಯ್ದೆ 1973ರ ಕಾಯ್ದೆ ಸೆಕ್ಷನ್ 27(3)ರ ಪ್ರಕಾರ ಅವರಿರುವ ಸ್ಥಳದಲ್ಲಿಯೇ ಪುನರ್ವಸತಿ ಕಲ್ಪಿಸಿಕೊಡಬೇಕು.
ಈಗಾಗಲೇ ಅದೇ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ, ಕಾರ್ಮಿಕರ ವಿಚಾರಕ್ಕೆ ಬಂದರೆ ಅದು ಕೆರೆಗೆ ಸೇರಿದ ಜಾಗ ಎನ್ನುತ್ತಿದ್ದಾರೆ. ಸರ್ಕಾರದ ಈ ಧೋರಣೆಯಿಂದಾಗಿ ಕಳೆದ ಆಗಸ್ಟ್ ನಿಂದ ಕಾರ್ಮಿಕರು ಟಾರ್ಪಲಿನ್ ಗುಡಿಸಲುಗಳಲ್ಲಿ ವಾಸಿಸುವಂತಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಮೊದಲು ಎಲ್ಲಿ ಪುನರ್ವಸತಿ ಕಲ್ಪಿಸಲಿದೆ ಎಂಬುದನ್ನು ಸ್ಪಷ್ಟಪಡಿಸಲಿ, ನಂತರ ಈ ಕುರಿತು ವಿಚಾರಿಸೋಣ ಎಂದಿತಲ್ಲದೇ, ಈ ವಿಚಾರದಲ್ಲಿ ಮತ್ತಷ್ಟು ಕಾಲ ಎಳೆದಾಡುವುದು ಸೂಕ್ತವಲ್ಲ. ಎಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಕೂರುವುದು ಸರಿಯಲ್ಲ.
ಹೀಗಾಗಿ, ಸರ್ಕಾರ ಮುಂದಿನ ಒಂದು ವಾರದೊಳಗೆ ಈ ಸಂಬಂಧ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿತು. ವಿಚಾರಣೆ ಸಂದರ್ಭದಲ್ಲಿ ಕಾರ್ಮಿಕರ ಪರ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಎನ್ ಜಿ ಒ ಸಂಸ್ಥೆಯೊಂದು ಕಾರ್ಮಿಕರಲ್ಲಿ 33 ಮಂದಿಗೆ ಶೆಡ್ ನಿರ್ಮಿಸಿಕೊಡಲು ಸಿದ್ಧವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬರೀ 33 ಮಂದಿಗೆ ನೀಡಿದರೆ ಅದು ಸರಿಹೋಗದು.
ಘಟನೆಯಲ್ಲಿ 170 ಗುಡಿಸಲುಗಳು ನಾಶವಾಗಿವೆ. ಹೀಗಾಗಿ, ಎಲ್ಲರಿಗೂ ಒಂದೇ ಮಾದರಿಯ ಪರಿಹಾರ ಅಗತ್ಯವಿದೆ ಎಂದಿತು. ಇದಕ್ಕೆ ಉತ್ತರಿಸಿದ ಪ್ರೊ. ರವಿವರ್ಮ ಕುಮಾರ್, ಈ ಕುರಿತು ಎಲ್ಲರಿಗೂ ಶೆಡ್ ನಿರ್ಮಿಸಿಕೊಡಲು ಸಾಧ್ಯವೇ ಎಂಬುದನ್ನು ಎನ್.ಜಿ.ಓ ಬಳಿ ವಿಚಾರಿಸಿ ಮಾಹಿತಿ ನೀಡುವುದಾಗಿ ತಿಳಿಸಿದರು.