ಬೆಂಗಳೂರು: ನಿನ್ನೆ ಒಂದೆಡೆ ಆರ್.ಆರ್.ನಗರದ ಮತ ಎಣಿಕೆ. ಮತ್ತೊಂದೆಡೆ ಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ. ಬೆಂಕಿ ಅನಾಹುತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ, ಮತ ಎಣಿಕೆ ಬಳಿ ನಿಯೋಜನೆಗೊಂಡಿದ್ದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಸ್ಥಳಕ್ಕೆ ಬಂದಾಗ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು.
ಕಳೆದ 25 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸದ್ಯ ಗೋದಾಮಿನ ಒಂದು ಕಟ್ಟಡದ ಸೀಲಿಂಗ್ ಕುಸಿದಿರುವ ಕಾರಣ ಕೆಳ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಹೊಗೆಯಾಡುತ್ತಿದ್ದು, ಸಂಜೆಯವರೆಗೆ ಇರಬಹುದೆಂದು ಅಗ್ನಿಶಾಮಕ ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ.
ಹೊಸಗುಡ್ಡದಹಳ್ಳಿಯ ಕುವೆಂಪುನಗರದ ಬಳಿ ಸುಮಾರು 20 ವರ್ಷಗಳಿಂದ ರೇಖಾ ಕೆಮಿಕಲ್ ಫ್ಯಾಕ್ಟರಿ ಗೋದಾಮು ಇದ್ದು, ಪರವಾನಗಿ ಇಲ್ಲದೇ ಫ್ಯಾಕ್ಟರಿ ನಡೆಸುತ್ತಿದ್ದುದಾಗಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಗೋದಾಮಿನ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹಾಗೆ ತಲೆ ಮರೆಸಿಕೊಂಡಿರುವ ಮಾಲೀಕರಿಗೆ ಪಶ್ಚಿಮ ವಿಭಾಗದ ಪೊಲೀಸರ ತಂಡ ಶೋಧ ಮುಂದುವರೆಸಿದೆ. ಇದೇ ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಕುಂಬಳಗೋಡು ಬಳಿ ಇದೆ. ಇದಕ್ಕೆ ಪರವಾನಗಿ ಪಡೆದಿದ್ದು, ಇಲ್ಲಿ ಸಂಗ್ರಹಿಸಿರುವ ಸ್ಯಾನಿಟೈಸರ್, ಕೆಮಿಕಲ್ ತಂದು ಹೊಸಗುಡ್ಡದ ಹಳ್ಳಿ ಬಳಿ ಶೇಖರಣೆ ಮಾಡಲಾಗ್ತಿತ್ತು ಎನ್ನಲಾಗಿದೆ.
ಫ್ಯಾಕ್ಟರಿಗೆ ಹೊಂದಿಕೊಂಡಂತೆ ಬಹಳಷ್ಟು ಮನೆಗಳಿವೆ. ವಾಯುಮಾಲಿನ್ಯ ಹೆಚ್ಚಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹಾಗಾಗಿ, ಘಟನಾ ಸ್ಥಳದಿಂದ 200 ಮೀಟರ್ ವ್ಯಾಪ್ತಿಯ 50 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಬೆಂಕಿ ಹೊಗೆಯಾಡುತ್ತಿದ್ದು, ಸ್ಥಳದಲ್ಲೇ ಅಗ್ನಿಶಾಮಕ ಸಿಬ್ಬಂದಿ ಮೊಕ್ಕಾಂ ಹೂಡಿದೆ.
ಅವಘಡದಲ್ಲಿ ಜೀವ ಉಳಿದರೆ ಸಾಕು ಎಂದು ಓಡಿದ್ದ ಜನರು, ಮರಳಿ ಮನೆ ಬಳಿ ಬಂದು ನೋಡಿದಾಗ ಎಲ್ಲ ಸುಟ್ಟು ಕರಕಲಾಗಿವೆ. ಇದರಿಂದ ನೊಂದ ಜನರು, ಕಂಪನಿ ಮಾಲೀಕನ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗಳ ಮದುವೆ ಸಂಭ್ರಮದಲ್ಲಿದ್ದವರಿಗೆ ಶಾಕ್
ಕೆಮಿಕಲ್ ಪ್ಯಾಕ್ಟರಿ ಬಳಿ ಎಂ ಮಣಿ ಅವರು ವಾಸವಿದ್ದು, ಮೂರು ಮಹಡಿಗಳ ಕಟ್ಟಡದಲ್ಲಿ ಮನೆಗಳನ್ನ ಭೋಗ್ಯಕ್ಕೆ ನೀಡಿದ್ರು.. ಹಾಗೆ ನೆಲ ಮಹಡಿಯಲ್ಲಿ ಪೀಠೋಪಕರಣ ಉದ್ಯಮ ನಡೆಸ್ತಿದ್ರು. ಇಂದು ಮಗಳ ಮದುವೆಯಿದ್ದ ಕಾರಣ ಮನೆಯ ಮೇಲ್ಮಹಡಿಯಲ್ಲಿ ಸಮಾರಂಭಕ್ಜೆ ಬೇಕಾದ ವಸ್ತುಗಳನ್ನ ಇರಿಸಲಾಗಿತ್ತು ಸದ್ಯ ವಸ್ತು, ಪೀಠೋಪಕರಣಗಳೆಲ್ಲ ಕರಕಲಾಗಿದ್ದು, ದಿಕ್ಕು ತೋಚದೆ ಕಂಗಲಾಗಿದ್ದಾರೆ.
80 ಸಾವಿರ ಹಣ ಸುಟ್ಟು ಕರಕಲು
ಪ್ರಸನ್ನ ಎಂಬುವವರು ಸಹೋದರಿ ಜೊತೆ ವಾಸವಿದ್ದು, ನಿನ್ನೆ ಮುಂಜಾನೆ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ತೆರಳಿದ್ರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ, ಫ್ರಿಡ್ಜ್, ಎಲೆಕ್ಟ್ರಿಕಲ್ ವಸ್ತು, ಬಟ್ಟೆ ಪ್ರಮುಖವಾಗಿ 80 ಸಾವಿರ ನಗದು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಕಾರುಗಳು ಭಸ್ಮ
ಕೆಮಿಕಲ್ ಫ್ಯಾಕ್ಟರಿಯ ಪಕ್ಕಾ ಡ್ರೈವ್ ಜಿ ಕಂಪನಿಯಿದ್ದು, ಕಾರುಗಳನ್ನ ಬಾಡಿಗೆಗೆ ಕೊಡುತ್ತಿದ್ದರು. ಆದರೆ, ನಿನ್ನೆ ಅಗ್ನಿ ದುರಂತದಿಂದ ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಇದರ ಜೊತೆಗೆ ಸುತ್ತಮುತ್ತ ನಿಲ್ಲಿಸಿದ್ದ ಮಹೀಂದ್ರ, ಸ್ಕಾರ್ಪಿಯೋ, ಶಿಫ್ಟ್, ಸ್ಕೋಡಾ, ಟಾಟಾ ಸುಮೋ ಹಾಗೂ ಮಹೀಂದ್ರ ಪಿಕಪ್ ಡಿಯೋ ಬೈಕ್ ಭಸ್ಮವಾಗಿದೆ.
ಪಾರಿವಾಳ ಪಾರು ಮಾಡಿದ ಸಿಬ್ಬಂದಿ
ಫ್ಯಾಕ್ಟರಿ ಹತ್ತಿರದ ಬಿಲ್ಡಿಂಗ್ ನಲ್ಲಿ ನೂರಕ್ಕೂ ಹೆಚ್ವು ಪಾರಿವಾಳ ಸಾಕಿದ್ದು, ಆ ಪಾರಿವಾಳ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು. ಇನ್ನೂ ಉಳಿದಿದ್ದ ಪಾರಿವಾಳಗಳನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದರು.
ಘಟನೆಗೆ ಕಾರಣವೇನು
ಪ್ರಾಥಮಿಕ ತನಿಖೆ ವೇಳೆ ಗೋದಾಮಿನಲ್ಲಿರುವ ಬ್ಯಾರಲ್ನಿಂದ ಮತ್ತೊಂದು ಬ್ಯಾರಲ್ಗೆ ಪೈಪ್ ಮೂಲಕ ರಾಸಾಯನಿಕ ದ್ರಾವಣ ತುಂಬಲಾಗುತ್ತಿತ್ತು. ಈ ವೇಳೆ, ಸ್ಪಾಟಿಕ್ ಚಾರ್ಜ್ ನಿಂದ ಬೆಂಕಿ ಕಿಡಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
300 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತಂದಿದ್ದಾರೆ. 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಸ್ಥಳೀಯ ಶಾಸಕರು ಭರಿಸುವುದಾಗಿ ತಿಳಿಸಿದ್ದಾರೆ.
ನಾಲ್ಕು ಕೋಟಿ ರೂ.ನಷ್ಟ
ಸುಮಾರು ನಾಲ್ಕು ಕೋಟಿ ರೂಪಾಯಿ ನಷ್ಟ ಸಂಭವಿಸರಬಹುದೆಂದು ಅಂದಾಜಿಸಲಾಗಿದೆ. ಮಾಜಿ ಸಚಿವ ಎಂ.ಕೃಷ್ಣಪ್ಪ, ಬಿಬಿಎಂಪಿ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಆರ್.ಟಿ.ಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು, ತಲೆ ಮರೆಸಿಕೊಂಡಿರುವ ಸಜ್ಜನ್ ರಾಜ್ ಹಾಗೂ ಕಮಲ ಅವರಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.