ಬೆಂಗಳೂರು: ಕೋವಿಡ್ ನಿಯಮ ಪಾಲಿಸದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ದ ಎಫ್ಐಆರ್ ದಾಖಲಾಗಿದೆ. ಜುಲೈ 12ರಂದು ಯೂತ್ ಕಾಂಗ್ರೆಸ್ ಸಂಘವು ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡಿತ್ತು. ಈ ಪ್ರತಿಭಟನೆ ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆದಿದ್ದು, ಕೇಂದ್ರ ಸರ್ಕಾರದ ವಿರುದ್ದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಇನ್ನು ಪ್ರತಿಭಟನೆಗೆ ಅನುಮತಿ ಪಡೆಯದೇ, ಸಾಮಾಜಿಕ ಅಂತರ ಸೇರಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳದೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸೇರಿ 17 ಮಂದಿ ವಿರುದ್ದ ದೂರು ದಾಖಲಿಸಲಾಗಿದೆ.
ಸರ್ಕಾರದ ಲಾಕ್‌ಡೌನ್ ನಿಯಮಾವಳಿಗಳನ್ನ ಉಲ್ಲಂಘಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದು, IPC 188 ಹಾಗೂ ಎನ್ಡಿಎಂಎ ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ.