ಬೆಂಗಳೂರು : ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಬಿಬಿಎಂಪಿಯ ಒಎಫ್ಸಿ ಕೇಬಲ್ ನಿಯಮಾವಳಿ ಉಲ್ಲಂಘಿಸಿ ಅನಧಿಕೃತವಾಗಿ ಕೇಬಲ್ ಅಳವಡಿಸಿರುವ ಆರೋಪದ ಮೇಲೆ ಜಿಯೋ ಡಿಜಿಟಲ್ ಫೈಬರ್ ಪ್ರೈವೇಟ್ ಲಿಮಿಟೆಡ್‌ನ ಗುತ್ತಿಗೆದಾರ ಶರಣ್ಯ ಮೇಲೆ ಬಿಬಿಎಂಪಿ ಕೇಸ್ ದಾಖಲಿಸಿದೆ.
ಸರ್ಜಾಪುರದ ಮುಖ್ಯ ರಸ್ತೆಗಳಲ್ಲಿ ಕಳೆದ ವಾರವಷ್ಟೇ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಜಿಯೋ ಸಂಸ್ಥೆ ಅ.5 ರಂದು ನಿಯಮ ಬಾಹಿರವಾಗಿ ಒಎಫ್ಸಿ ಕೇಬಲ್ ಅಳವಡಿಸಿದ್ದು, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿದ ಆರೋಪದ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಶರಣ್ಯ ಎಂಬವರ ಮೇಲೆ ಎಫ್ಐಆರ್ ದಾಖಲಾಗಿದೆ.
ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜಿಯೋ ಖಾಸಗಿ ಸಂಸ್ಥೆಯಿಂದ ರಸ್ತೆ ದುರಸ್ಥಿಗೆ ಅಗತ್ಯವಿರುವ ಹಣವನ್ನು ಕಂಪನಿಯ ಭದ್ರತಾ ಠೇವಣೆಯಿಂದ ಮುಟ್ಟುಗೋಲು ಹಾಕಿಕೊಳ್ಳಲು, 25 ಲಕ್ಷ ರೂ. ದಂಡ ವಿಧಿಸುವುದು ಹಾಗೂ ಜಿಯೋ ಡಿಜಿಟಲ್ ಫೈಬರ್ ಪ್ರೈ.ಲಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿಯ ಓಎಫ್ಸಿ ಮುಖ್ಯ ಎಂಜಿನಿಯರ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಬಿ .ಪ್ರಭಾಕರ ತಿಳಿಸಿದ್ದಾರೆ.