ಬೆಂಗಳೂರು : ಸುಳ್ಳು ಮಾಹಿತಿ ನೀಡಿ ವಂಚನೆ ಮಾಡಿದ ನ್ಯೂ ಜನಪ್ರಿಯ ಆಸ್ಪತ್ರೆ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದಲ್ಲಿ ಎರಡನೇ ಅಲೆ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇನ್ನು ಕೊವಿಡ್ ಸೋಂಕಿತರು ಚಿಕಿತ್ಸೆ ಪಡೆಯಲು ಹಗಲು ರಾತ್ರಿ ನೋಡದೇ ನಗರದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ ಬೆಡ್‌ಗಳಿಲ್ಲದೇ ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ಆದ್ರೆ ಸರ್ಕಾರದ ಆದೇಶ ಪಾಲಿಸದೇ ಸುಳ್ಳು ಮಾಹಿತಿ ನೀಡಿ ವಂಚನೆ ಮಾಡಿದ ನ್ಯೂ ಜನಪ್ರಿಯ ಆಸ್ಪತ್ರೆ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ಪತ್ರೆಯ ಸಿಇಓ ಗಂಗಾಧರ್ ಮಲ್ಲಪ್ಪ ಸೇರಿದಂತೆ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೂರ್ವ ವಿಭಾಗದ ಕೋವಿಡ್ ಕೇರ್ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳಾದ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಮೇಜರ್ ಮಣಿವಣ್ಣನ್ ನೇತೃತ್ವದ ತಂಡ ಭೇಟಿ ನೀಡಿತ್ತು. ನೋಡಲ್ ಅಧಿಕಾರಿಗಳ ಭೇಟಿ ವೇಳೆ ಆಸ್ಪತ್ರೆಯ ಕಳ್ಳಾಟ ಬಯಲಾಗಿದ್ದು, 42 ಬೆಡ್ ವ್ಯವಸ್ಥೆ ಹೊಂದಿದ್ದ ನ್ಯೂ ಜನಪ್ರಿಯ ಆಸ್ಪತ್ರೆ ಕೇವಲ 36 ಬೆಡ್‌ಗಳಿರುವುದಾಗಿ ಆಸ್ಪತ್ರೆ ಆಡಳಿತ ಮಂಡಳಿಯಿಂದ ಸರ್ಕಾರಕ್ಕೆ ಸುಳ್ಳು ದಾಖಲೆ ನೀಡಿದೆ.
ಆಸ್ಪತ್ರೆಯ 4ನೇ ಮಹಡಿಯಲ್ಲಿದ್ದ ಕ್ಯಾಂಟೀನ್ ನಲ್ಲಿ 4 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದ ಸಮನ್ವಯಾಧಿಕಾರಿ ಡಾ.ಭರತ್ ಕುಮಾರ್, ಐಪಿಸಿ ಸೆಕ್ಷನ್ - 188, 34 ಹಾಗೂ ಎನ್.ಡಿ.ಎಂ.ಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.