ಬೆಂಗಳೂರು: ಇತ್ತೀಚೆಗೆ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ನೀಡಿದ ದೂರಿನ ಮೇರೆಗೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ವೈದ್ಯ ಸಾಗರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅಗ್ನಿ ಅವಘಡದಲ್ಲಿ ಮೂವರು ಗಾಯಾಳುಗಳನ್ನು ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅ.8 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಯಾಳುಗಳ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ಕೂಡಾ ವಿಚಾರಿಸಿದ್ದರು ಮತ್ತು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದರು.
ಇಷ್ಟು ಹೇಳಿದ್ದರೂ, ಆಸ್ಪತ್ರೆಯ ವೈದ್ಯ ಡಾ. ಸಾಗರ್, ಮೃತ ವೆಂಕಟೇಶ್ ಅವರ ಪೋಷಕರಿಗೆ ಕರೆ ಮಾಡಿ ಚಿಕಿತ್ಸೆ ನೀಡಲು ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನೇಕಲ್ನ ಅತ್ತಿಬೆಲೆಯ ಗಡಿಯಲ್ಲಿರುವ ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ಮಳಿಗೆಯ ಗೋಡೌನ್ಲ್ಲಿ ಅಕ್ಟೋಬರ್ 7 ರಂದು ಬೆಂಕಿ ಕಾಣಿಸಿಕೊಂಡು ದೊಡ್ಡ ಮಟ್ಟದ ಅವಘಡ ಸಂಭವಿಸಿತ್ತು. ಸಣ್ಣ ಬೆಂಕಿ ಕಿಡಿಯಿಂದ ಇಡೀ ಪಟಾಕಿ ಅಂಗಡಿಯೇ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ. ಘಟನೆ ಸಂದರ್ಭದಲ್ಲಿ ಗೋದಾಮಿನಲ್ಲಿಯೇ 12 ಜನ ಸಜೀವ ದಹನವಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 4 ಮಂದಿ ಉಸಿರು ಚೆಲ್ಲಿದ್ದಾರೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ತಪ್ಪಿಸ್ಥತರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಿಐಡಿ ತನಿಖೆ ಆರಂಭಿಸಿದ್ದು, ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಪರಿಹಾರ ಘೋಷಿಸಿವೆ.
'ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ಸಾವಿರ 5 ಲಕ್ಷ ರೂ ಪರಿಹಾರ ಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಹಾಗೆಯೇ ತಮಿಳುನಾಡು ಸರ್ಕಾರವು ಮೃತರ ಕುಟುಂಬಸ್ಥರಿಗೆ 3 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಾಧಾರಾಣ ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ವಿತರಿಸಲಾಗುವುದು ಎಂದು ಸಿಎಂ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ದುರಂತ: ಪಟಾಕಿ ಖರೀದಿಗೆ ಬಂದು ಪ್ರಾಣ ಕಳೆದುಕೊಂಡ ವ್ಯಕ್ತಿ, ಸಾವಿನ ಸಂಖ್ಯೆ 16ಕ್ಕೆ ಏರಿಕೆ