ಬೆಂಗಳೂರು: ಕೌಟುಂಬಿಕ ಕಲಹದ ಕಾರಣ ರಾಜಿ ಪಂಚಾಯತಿ ನಡೆಯುತ್ತಿದ್ದಾಗ ಎರಡು ಕುಟುಂಬಗಳ ಸದಸ್ಯರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ಘಟನೆ ಆರ್.ಟಿ.ನಗರನ ಸಮೀಪದ ಇರುವ ಗಣೇಶ ಬ್ಲಾಕ್ನಲ್ಲಿ ತಡರಾತ್ರಿ ನಡೆದಿದೆ. ಹುಡುಗನ ಮನೆಯವರು ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹುಡುಗಿಯ ಮನೆಯವರು ರಾಜಿ ಪಂಚಾಯಿತಿಗೆ ಬಂದಿದ್ದಾಗ ಘಟನೆ ಜರುಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಆರ್.ಟಿ.ನಗರದ ಯುವಕನೊಂದಿಗೆ ಹೆಸರುಘಟ್ಟ ಬಳಿಯ ಫಾರ್ಮ್ ಹೌಸ್‌ನಲ್ಲಿ ಯುವತಿಯನ್ನು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಪ್ರತಿ ದಿನ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ. ಪತಿ ಪತ್ನಿಗೆ ಐಸ್ ಕ್ರೀಂ, ಫಿಜ್ಜಾ ಕೊಡಿಸಿದರೂ ಕೂಡ ಹುಡುಗಿ ಮನೆಗೆ ಕರೆ ಮಾಡಿ, ''ಐಸ್ ಕ್ರೀಮ್ ಫಿಜ್ಜಾಗೆ ಖರ್ಚಾದ ಹಣ ಕೊಡಿ'' ಎಂದು ಕೇಳಲಾರಂಭಿಸಿದ್ದ. ಆತನ ಕಾಟಕ್ಕೆ ಬೇಸತ್ತ ಹುಡುಗಿಯ ಕುಟುಂಬಸ್ಥರು ಸಾಕಷ್ಟು ಬಾರಿ ಬುದ್ದಿವಾದ ಹೇಳಿದ್ದರು. ಆದರೆ ಹುಡುಗನ ಚಾಳಿ ಮುಂದುವರೆದಿದ್ದರಿಂದ ನಿನ್ನೆ ಹುಡುಗಿಯ ಕುಟುಂಬದವರೆಲ್ಲಾ ಮಾತುಕತೆಗಾಗಿ ಹುಡುಗನ ಮನೆಗೆ ಬಂದಿದ್ದರು. ಈ ವೇಳೆ ಹೆಂಡತಿಯ ಮನೆಯವರು ಪಂಚಾಯತಿಗೆ ಬಂದಿದ್ದಾರೆ ಎಂದು ಗೊತ್ತಿದ್ದರೂ ಕೂಡ ಯುವಕ ಮದ್ಯಪಾನ ಮಾಡಿಕೊಂಡು ಬಂದಿದ್ದ. ಈ ವೇಳೆ ಎರಡೂ ಕಡೆಯವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಮೊದಲಿಗೆ ಹುಡುಗನ ಮನೆಯವರೇ ಹುಡುಗಿ ಮನೆಯವರಿಗೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಆರ್.ಟಿ.ನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದು ಹುಡುಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆನೇಕಲ್: ಪ್ರೇಮಕ್ಕಾಗಿ ಇಬ್ಬರು ಸ್ನೇಹಿತರ ಜಗಳ, ಓರ್ವನ ಕೊಲೆ; ಯುವತಿ ಸೇರಿ ಮೂವರು ಸೆರೆ