ಬೆಂಗಳೂರು: ವಿದ್ಯಾರ್ಥಿ ಬಸ್ ಪಾಸ್, ಹಾಸ್ಟೆಲ್, ವಿದ್ಯಾರ್ಥಿ ವೇತನ, ಸಾರಿಗೆ ಸಮಸ್ಯೆ ಹಾಗೂ ಶಿಕ್ಷಕ-ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯದ ಪ್ರತಿಷ್ಠಿತ ಕನ್ನಡ ವಿವಿ ಸೇರಿದಂತೆ ಯಾವ ವಿಶ್ವವಿದ್ಯಾಲಯಗಳಿಗೂ ಅಭಿವೃದ್ಧಿಗೆ ಹಣ ನೀಡದೆ, ಖಾಸಗಿ ವಿವಿಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಪುಷ್ಟಿಕರಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಇತ್ತೀಚೆಗೆ 3 ಖಾಸಗಿ ವಿವಿಗಳಿಗೆ ಅನುಮೋದನೆ ನೀಡಿ ಶಿಕ್ಷಣದ ಖಾಸಗಿಕರಣಕ್ಕೆ ನೇರವಾಗಿ ವೇದಿಕೆ ಒದಗಿಸಿಕೊಟ್ಟಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ವಿದ್ಯಾರ್ಥಿ ಸಮುದಾಯ ಬಸ್ ಪಾಸ್, ಹಾಸ್ಟೆಲ್, ವಿದ್ಯಾರ್ಥಿ ವೇತನ, ಸಾರಿಗೆ ಸಮಸ್ಯೆ ಹಾಗೂ ಶಿಕ್ಷಕ-ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದೆ. ಆನ್‌ಲೈನ್ ತರಗತಿ ನಡೆದಿವೆ ಎನ್ನುವ ಕಾರಣ ನೀಡಿ, ಪ್ರಾಕ್ಟಿಕಲ್ ತರಗತಿ ಇಲ್ಲದೆಯೂ ಪರೀಕ್ಷೆ ನಡೆಸಲು ಸರ್ಕಾರ, ವಿವಿ ಮುಂದಾಗಿವೆ. ಆನ್‌ಲೈನ್ ತರಗತಿಗಳಿಂದ ವಂಚಿತರಾದ ವಿದ್ಯಾರ್ಥಿಗಳು ಈಗ ಪರೀಕ್ಷೆ ಎದುರಿಸುವುದು ಕಷ್ಟ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದರು.
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಡಿತ ಮಾಡಿರುವುದು ಈ ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರವಿಡುವ ಹುನ್ನಾರವಾಗಿದೆ. ಇದನ್ನು ಕೈಬಿಟ್ಟು ಮುಂದಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು. ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಜಾರಿಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.