ಬೆಂಗಳೂರು: ಕೊರೊನಾ ಲಾಕ್ಡೌನ್ ವೇಳೆ ಕಾರ್ಯನಿರ್ವಹಿಸಿದ ಅಂಚೆ ನೌಕರರಿಗೆ ರಾಷ್ಟ್ರೀಯ ಅಂಚೆ ಸಪ್ತಾಹ ಹಿನ್ನೆಲೆಯಲ್ಲಿ 'ಡಾಕ್ ಸೇವಾ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ನಗರದ ಬೆಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವೇಳೆ ನಿಸ್ವಾರ್ಥ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಅಂಚೆ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.
ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಹಿಂದಿನ ಐಐಎಸ್ಸಿ ನಿರ್ದೇಶಕ ಜಿ ಪದ್ಮನಾಭನ್ ಮತ್ತು ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಮಾತನಾಡಿ, ಲಾಕ್ಡೌನ್ ವೇಳೆ ಹಳ್ಳಿ- ಹಳ್ಳಿಗೆ ತೆರಳಿ ಸಮಯಕ್ಕೆ ಸರಿಯಾಗಿ ಔಷಧಗಳನ್ನು ತಲುಪಿಸುವಲ್ಲಿ ಹಗಲಿರುಳು ನೌಕರರು ಕೆಲಸ ನಿರ್ವಹಿಸಿದ್ದಾರೆ. ಈ ವೇಳೆ ಹಿರಿಯ ನಾಗರಿಕರ ಉಳಿತಾಯ ಖಾತೆ ಗ್ರಾಹಕರಿಗೆ ಮನೆ- ಮನೆಗೆ ಸೇವೆಯನ್ನು ನೀಡಿರುವ ಮೂಲಕ ಕೋವಿಡ್ ವಾರಿಯರ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ವಿಶ್ವ ಕೈ ತೊಳೆಯುವ ದಿನದ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶೇಷ ಅಂಚೆ ಚೀಟಿ ಮತ್ತು ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು. ಪುರಸ್ಕೃತರನ್ನು ಅಭಿನಂದಿಸಿ ಪ್ರಶಸ್ತಿ ವಿತರಿಸಲಾಯಿತು.