ದೊಡ್ಡಬಳ್ಳಾಪುರ: ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ತೆರಳುವ ವಾಹನ ಸವಾರರಿಂದ ಬೇಕಾಬಿಟ್ಟಿ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಜನವರಿ 19ರಂದು ನಡೆಯಲಿದ್ದು, ಕ್ಷೇತ್ರದಲ್ಲಿ ನಡೆಯುವ ದನಗಳ ಜಾತ್ರೆ ಈಗಾಗಲೇ ಶುರುವಾಗಿದೆ. ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ಘಾಟಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುವರು. ಭಕ್ತರು ಕಾಣಿಕೆಯಾಗಿ ನೀಡುವ ಹುಂಡಿ ಹಣದಿಂದ ಲಕ್ಷಾಂತರ ರೂಪಾಯಿ ಆದಾಯ ದೇವಸ್ಥಾನಕ್ಕೆ ಬರುತ್ತದೆ. ಡಿಸೆಂಬರ್ ತಿಂಗಳು ಹುಂಡಿ ಹಣ ಎಣಿಕೆ ಮಾಡಿದ್ದಾಗ ದಾಖಲೆಯ 60 ಲಕ್ಷ ಹಣ ಸಂಗ್ರಹವಾಗಿತ್ತು. ಇದರ ಜೊತೆಗೆ ದೇವಸ್ಥಾನಕ್ಕೆ ವಾಹನಗಳ ಪ್ರವೇಶ ಶುಲ್ಕದಿಂದ ಸಹ ಆದಾಯ ಬರುತ್ತಿದೆ. 10 ತಿಂಗಳು ಎಸ್.ಎಸ್ ಘಾಟಿ ಗ್ರಾಮ ಪಂಚಾಯಿತಿಯವರು ವಾಹನಗಳ ಪ್ರವೇಶ ಶುಲ್ಕದ ಆದಾಯ ಪಡೆದಿದ್ದಾರೆ ಎನ್ನಲಾಗಿದೆ.
ದಿನಾಂಕ 01/12/2020ರಿಂದ 31/01/2021ರವರೆಗಿನ ಎರಡು ತಿಂಗಳ ವಾಹನಗಳ ಮೇಲಿನ ಸುಂಕ ವಸೂಲಿಯ ಹಕ್ಕನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಬಹಿರಂಗ ಹರಾಜು ಮಾಡಲಾಗಿದ್ದು, ಇದರ ಗುತ್ತಿಗೆಯನ್ನ 13 ಲಕ್ಷಕ್ಕೆ ಪಾಲ್ ಪಾಲ್ ದಿನ್ನೆಯ ಅಪ್ಪಯ್ಯಪ್ಪ ಎಂಬುವರು ಪಡೆದುಕೊಂಡಿದ್ದಾರೆ. ಘಾಟಿ ಕ್ಷೇತ್ರಕ್ಕೆ ಸಂಪರ್ಕಿಸುವ ದೊಡ್ಡಬಳ್ಳಾಪುರ ಕಡೆಯಿಂದ ಮತ್ತು ಗೌರಿಬಿದನೂರು ಕಡೆಯಿಂದ ಎರಡು ಕಡೆ ವಾಹನಗಳ ಪ್ರವೇಶ ಸುಂಕವನ್ನು ವಸೂಲಾತಿ ಮಾಡಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಂದ 10 ರೂಪಾಯಿ, ನಾಲ್ಕು ಚಕ್ರದ ವಾಹನಗಳಿಗೆ 20 ರೂಪಾಯಿ ಶುಲ್ಕ, ಇದರ ಜೊತೆಗೆ 30 ಮತ್ತು 50 ರೂಪಾಯಿ ಪ್ರವೇಶ ಸುಂಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.