ಬೆಂಗಳೂರು : ಮಗುವನ್ನು ಕೊಲೆ ಮಾಡಿದ ಬಳಿಕ ಬೇರೊಂದು ಕಡೆ ತೆರಳಿದ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಮಗು ಸಾವನ್ನಪ್ಪಿದ್ದು, ಸಂಜೆಯ ವೇಳೆ ತಂದೆಯ ಮೃತದೇಹ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಸಂಪಂಗಿರಾಮನಗರ ನಿವಾಸಿ ಸುರೇಶ್ ತನ್ನ 10 ವರ್ಷದ ಮಗ ಉದಯ್ ಸಾಯಿರಾಮ್ನನ್ನು ಬೆಳ್ಳಂಬೆಳಗ್ಗೆ ಸಂಪಿಗೆ ಬಿಸಾಡಿ ಕೊಲೆ ಮಾಡಿದ್ದ. ಈ ಸಂಬಂಧ ಎಸ್.ಆರ್. ನಗರದ ನಿವಾಸಿ ಸುರೇಶ್ ವಿರುದ್ಧ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
10 ವರ್ಷದ ಮಗನಿಗೆ ಮಾತು ಬರುತ್ತಿರಲಿಲ್ಲ, ಕಿವಿಯೂ ಕೇಳುತ್ತಿರಲಿಲ್ಲ. ಈ ಹಿನ್ನೆಲೆ ಸುರೇಶ್ ಸಾಕಷ್ಟು ಮನನೊಂದಿದ್ದ. ಇದೇ ವಿಷಯವಾಗಿ ಮನೆಯಲ್ಲಿ ಆಗಾಗ ಜಗಳ ಮಾಡುತ್ತಿದ್ದ. ನಿನ್ನೆ ರಾತ್ರಿಯೂ ಕೂಡಾ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಬೆಳಗಿನ ಜಾವ ಐದು ಗಂಟೆಗೆ ಮಗುವನ್ನು ಸಂಪಿಗೆ ಎಸೆದ ಆರೋಪಿ:
ಇಂದು ಬೆಳಗಿನ ಜಾವ ಐದು ಗಂಟೆಗೆ ಪತ್ನಿ ಜೊತೆಗಿದ್ದ ಮಗುವನ್ನು ಸಂಪಿಗೆ ಎಸೆದು ಕಣ್ಮರೆಯಾಗಿದ್ದ. ಈ ಘಟನೆಯ ಸಂಬಂಧ ಎಸ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬೆನ್ನು ಹತ್ತಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಎಸ್.ಆರ್. ನಗರ ಪೊಲೀಸರಿಗೆ ಶೇಷಾದ್ರರಿಪುರಂ ಪೊಲೀಸರು ಕರೆ ಮಾಡಿದ್ದರು. ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ.
ನೇಣು ಬಿಗಿದುಕೊಂಡು ಆತ್ಮಹತ್ಯೆ:
ಆರೋಪಿ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿ ರೈಲ್ವೆ ಹಳಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಸುರೇಶ್ ಎನ್ನುವುದು ಖಚಿತ ಪಟ್ಟಿತ್ತು. ಮಗುವನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೃಢಪಟ್ಟಿದ್ದು, ಘಟನೆಯ ಸಂಬಂಧ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುರೇಶ್ಗೂ ಕೂಡ ಆರೋಗ್ಯ ಸಮಸ್ಯೆ:
ಸುರೇಶ್ಗೂ ಸಹ ಸಾಕಷ್ಟು ಆರೋಗ್ಯ ಸಮಸ್ಯೆ ಇತ್ತು. ಮಗು ಹಾಗೂ ತಾನು ಹೆಂಡತಿಗೆ ಭಾರವಾಗಬಾರದೆಂದು ನಿರ್ಧರಿಸಿದ್ದ. ಈ ವಿಚಾರವನ್ನು ಹಲವು ಬಾರಿ ಹೆಂಡತಿ ಜೊತೆ ಚರ್ಚಿಸಿದ್ದ. ಈ ಸಮಯದಲ್ಲೆಲ್ಲ ಗಂಡನ ಜೊತೆ ಪತ್ನಿ ಜಗಳ ಮಾಡುತ್ತಿದ್ದರು. ಆದರೆ, ಇಂದು ಮಗು ಕೊಂದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.