ಬೆಂಗಳೂರು: ಲಾಭವಿಲ್ಲದೆ ಕೋಡಿಹಳ್ಳಿ ಯಾವ ಕೆಲಸ ಮಾಡಲ್ಲ. ಹಾಗಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಸುಭಾಷ್ ಐಕೂರ ಆರೋಪಿಸಿದ್ದಾರೆ.
ಮೊದಲು ರೈತ ಸಂಘಟನೆಗೆ ಜೀವಂತಿಕೆ ತುಂಬಲಿ. ಅದನ್ನು ಬಿಟ್ಟು ಸಾರಿಗೆ ನೌಕರರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ ಎಂದು ಕಿಡಿಕಾರಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಇಂತಹ ವಿಷಮ ಕಾಲದಲ್ಲಿ ಸಾರಿಗೆ ಸಂಸ್ಥೆಯ ನೌಕರರ ದಾರಿ ತಪ್ಪಿಸುವುದು ಸಮಯೋಚಿತ ನಡೆಯಲ್ಲ. ಜನವಿರೋಧಿ ನಡೆ ಎಂದು ಹರಿಹಾಯ್ದರು.
ಸಾರಿಗೆ ನೌಕರರ ಮುಷ್ಕರದಿಂದ ಕೊರೊನಾ ನಡುವೆ ಬೇಸಿಗೆಯಲ್ಲಿ ಜನರು ಪರಿತಪಿಸುವಂತಾಗಿದೆ. ನೌಕರರಿಗೆ ಕೋಡಿಹಳ್ಳಿ ಕುಮ್ಮಕ್ಕು ನೀಡಿರುವುದು ಸರಿಯಲ್ಲ. ಕೋಡಿಹಳ್ಳಿಯವರಿಗೆ ಜನಸಾಮಾನ್ಯರ ಕಷ್ಟ ಮೊದಲೇ ಗೊತ್ತಿಲ್ಲ ಎಂದರು.
ಯುಗಾದಿ ಹಾಗೂ ರಂಜಾನ್ ಸೇರಿದಂತೆ ಪ್ರಮುಖ ಹಬ್ಬಗಳು ಬರುತ್ತಿದ್ದು, ಜನರ ಓಡಾಟ ಜಾಸ್ತಿಯಿರುತ್ತೆ. ಪ್ರಮುಖವಾಗಿ ಬೇಸಿಗೆಯಲ್ಲಿ ಬಸ್ಗಳು ಇರದೇ ಮಕ್ಕಳು, ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತದೆ. ಇದೆಲ್ಲಾ ತಿಳಿದು ಅವರು ಈ ಹೋರಾಟಕ್ಕೆ ಬಂಬಲ ನೀಡಿರುವುದು ಸರಿಯಲ್ಲ ಎಂದಿದ್ದಾರೆ.