ಬೆಂಗಳೂರು: ಇಂದು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾನಿರತ ರೈತರನ್ನು ಪೊಲೀಸರು ಬಂಧಿಸಿದರು.
ಹೌದು, ಇಂದು ಬೆಳಗ್ಗೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿತ್ತು. ಅಂತೆಯೇ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮೊದಲಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 11 ಗಂಟೆಯ ನಂತರ ಪ್ರತಿಭಟನೆ ಕಾವು ಜೋರಾಯ್ತು.
ಮೊದಲಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಯ್ತು. ಬಸ್ ನಿಲ್ದಾಣದ ಬಳಿ ಪ್ರತಿಭಟನೆಯಲ್ಲಿ ಟ್ರ್ಯಾಕ್ಟರ್ಗಳ ಬಳಕೆ ವಿಷಯಕ್ಕೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ, ಮಾತಿನ ಚಕಮಕಿ ನಡೆಯಿತು. ನಂತರ ಮೆರವಣಿಗೆ ಕೆಂಪೇಗೌಡ ವೃತ್ತ ತಲುಪಿ ಸುಮಾರು ಅರ್ಧ ಗಂಟೆಗಳ ಕಾಲ NH 7 ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ರೈತರನ್ನು ಬಂಧಿಸಿದರು.
ಭೂ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಂಡ ಪೊಲೀಸರು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹೆದ್ದಾರಿಯಲ್ಲಿ ವಾಹನಗಳನ್ನು ಡೈವರ್ಟ್ ಮಾಡಿದ್ರು. ಪಟ್ಟಣದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಬ್ರೇಕ್ ಹಾಕಿದ್ದಲ್ಲದೇ ಅವರಿಗೆ ಬದಲಿ ಮಾರ್ಗವಾದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಕಳುಹಿಸಿದ್ರು. ಡೈವರ್ಟ್ ಹಿನ್ನೆಲೆ ರಸ್ತೆ ಮಾರ್ಗ ತಿಳಿಯದೆ ವಾಹನ ಸವಾರರ ಪರದಾಡಬೇಕಾಯಿತು.
ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದ ರೈತರು, ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ದುಡ್ಡಿಗಾಗಿ ರೈತರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದರು.