ಬೆಂಗಳೂರು: ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋ ಒಳಗಡೆ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಬೃಹತ್ ಎಲ್‌ಇಡಿ ಪರದೆ ಮೇಲೆ ನೇರಪ್ರಸಾರ ವೀಕ್ಷಣೆಗೆ ಅವಕಾಶವಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಎಲ್ಇಡಿ ಕೈಕೊಟ್ಟು ಆಫ್ ಆಗುತ್ತಿದ್ದಂತೆ ಬೇಸರಗೊಂಡ ಅಭಿಮಾನಿಗಳು ಸರ್ವೀಸ್ ರಸ್ತೆ, ಕಟ್ಟಡಗಳ ಮೇಲಿಂದ ರಸ್ತೆಗಿಳಿಯಲು ಯತ್ನಿಸಿದರು.
ಆದರೆ ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅಭಿಮಾನಿಗಳನ್ನು ರಸ್ತೆಗಿಳಿಯದಂತೆ ನೋಡಿಕೊಂಡರು. ಬಳಿಕ ಹಿರಿಯ ಅಧಿಕಾರಿಗಳ ಕ್ಷಿಪ್ರ ಕಾರ್ಯಪಡೆ ಬಳಸಿ ಅಭಿಮಾನಿಗಳ ಮನವೊಲಿಸಿ ನಿಯಂತ್ರಿಸಿದರು. ಅಷ್ಟರಲ್ಲಿ ಎಲ್ಇಡಿ ಪರದೆ ಮತ್ತೆ ಆನ್ ಆಯಿತು. ಅಪ್ಪು ಅಭಿಮಾನಿಗಳು ಗಲಾಟೆ ಬಿಟ್ಟು ಅಂತ್ಯ ಸಂಸ್ಕಾರದ ದೃಶ್ಯ ನೋಡುವುದರಲ್ಲಿ ಮಗ್ನರಾದರು. ತಾಳ್ಮೆ ಕಳೆದುಕೊಳ್ಳದ ಅಪ್ಪು ಅಭಿಮಾನಿಗಳು ಪೊಲೀಸರಿಗೆ ಸಹಕಾರ ನೀಡಿದರು.
ಸ್ಟುಡಿಯೋಗೆ ನೋ ಎಂಟ್ರಿ:
ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ ನಡೆಸಿದ ನಂತರ ಸಮಾಧಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕಾದು ಕುಳಿತಿದ್ದ ಅಪ್ಪು ಅಭಿಮಾನಿಗಳಿಗೆ ನಿರಾಸೆಯಾಯಿತು. ಅಂತ್ಯಕ್ರಿಯೆ ನಡೆಸಿ ಕುಟುಂಬ ಸದಸ್ಯರು, ಗಣ್ಯರು ನಿರ್ಗಮಿಸಿದ ನಂತರ ಅವಕಾಶ ಸಿಗಬಹುದು ಎಂದು ಅಭಿಮಾನಿಗಳು ಕಾಯುತ್ತಾ ನಿಂತಿದ್ದರು. ಆದರೆ ಸಮಾಧಿ ಸ್ಥಳವನ್ನು ಭದ್ರಪಡಿಸುವವರೆಗೂ ಯಾರಿಗೂ ಅವಕಾಶ ನೀಡಬಾರದು ಎನ್ನುವ ಸೂಚನೆ ಸರ್ಕಾರದಿಂದ ಬಂದ ಹಿನ್ನೆಲೆಯಲ್ಲಿ ಯಾರಿಗೂ ಸ್ಟುಡಿಯೋ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಸ್ಟುಡಿಯೋ ಗೇಟ್ ಮುಂಭಾಗವನ್ನು ಬ್ಯಾರಿಕೇಡ್ಗಳಿಂದ ಮುಚ್ಚಿ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನ ಎಚ್ಚರಿಕೆ ಸೂಚನೆ ನೀಡಿ ತೆರವುಗೊಳಿಸಲಾಗಿದೆ. ಸ್ಟುಡಿಯೋ ಅನ್ನು ಪೊಲೀಸ್ ಸಿಬ್ಬಂದಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಮಗುವನ್ನ ಕಳೆದುಕೊಂಡಿದ್ದೀನಿ.. ಅಂತ್ಯಕ್ರಿಯೆ ಬಳಿಕ ಶಿವಣ್ಣನ ಭಾವುಕ ನುಡಿ