ಬೆಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಗ್ಗಂಟು ಮುಂದುವರಿದಿದ್ದು, ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ಸಿದ್ದರಾಮಯ್ಯ ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು. ಇನ್ನೊಂದೆಡೆ ನಗರದಲ್ಲಿಯೇ ಇದ್ದು ತಂತ್ರಗಾರಿಕೆ ಮುಂದುವರಿಸಲು ತೀರ್ಮಾನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕೊನೆ ಗಳಿಗೆಯಲ್ಲಿ ಹೈಕಮಾಂಡ್ನಿಂದ ಬುಲಾವ್ ಬಂದಿದ್ದರಿಂದ ಇವರು ಕೂಡ ದಿಲ್ಲಿಗೆ ಹೋಗ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ನಗರದ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕೊಂಚ ಒತ್ತಡದಲ್ಲಿರುವ ಸಿದ್ದರಾಮಯ್ಯ ಸಿಎಂ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ನಿರ್ಣಯಕ್ಕೆ ಬಿಟ್ಟಿದ್ದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಆಗಿಲ್ಲ. ಮತ್ತೊಂದೆಡೆ ಸಿದ್ದರಾಮಯ್ಯ ಮನೆ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಸಿಎಂ ಅಭ್ಯರ್ಥಿ ಸ್ಥಾನವೇ ಇನ್ನೂ ಗಟ್ಟಿ ಆಗಿಲ್ಲ, ಅದಾಗಲೇ ಅವರ ಬೆಂಬಲಿಗರು ಸಚಿವ ಸ್ಥಾನಕ್ಕೆ ಒತ್ತಡ ಹೇರಲು ಮನೆಗೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಭೇಟಿಗೆ ಬರುತ್ತಿರುವ ಅಭಿಮಾನಿಗಳ ಬಳಗವನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿದೆ.
ಸಿದ್ದರಾಮಯ್ಯ ನಿವಾಸದತ್ತ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಾಸನದ ಅರಸೀಕೆರೆಯಿಂದ ಬಂದಿರುವ ಕೆಲ ಅಭಿಮಾನಿಗಳು ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಅಂತಾ ಆಶಯ ವ್ಯಕ್ತಪಡಿಸಿದ್ದಾರೆ. ಹೂ ಗುಚ್ಛ ಹಿಡಿದು ತಂದಿರುವ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಶಾಸಕಾಂಗ ಸಭೆ ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹ ಕಾರ್ಯ ನಿನ್ನೆ ತಡ ರಾತ್ರಿವರೆಗೂ ನಡೆದ ಹಿನ್ನೆಲೆ ಸಿದ್ದರಾಮಯ್ಯ ನಿದ್ರೆಯಿಂದ ಬೆಳಗ್ಗೆ ತಡವಾಗಿ ಎದ್ದಿದ್ದಾರೆ.
ಹೈಕಮಾಂಡ್ ನಾಯಕರನ್ನು ಭೇಟಿಯಾಗಬೇಕಿರುವ ಹಿನ್ನೆಲೆ ಸಿದ್ದರಾಮಯ್ಯ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶಿವಾನಂದವೃತ್ತದ ಸರ್ಕಾರಿ ನಿವಾಸದಿಂದ ತೆರಳಿದ್ದಾರೆ. ಹೈಕಮಾಂಡ್ ಬುಲಾವ್ ಹಿನ್ನೆಲೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಆದರೆ ಅವರು ಸಿಎಂ ಸ್ಥಾನಕ್ಕೆ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಇದೆ.
ಸ್ವಾಮೀಜಿ ಭೇಟಿ: ಸಿದ್ದರಾಮಯ್ಯ ನಿವಾಸಕ್ಕೆ ಪ್ರಣಾವನಂದ ಸ್ವಾಮೀಜಿ ಭೇಟಿ ನೀಡಿದ್ದಾರೆ. ಆರ್ಯ ಈಡಿಗ ಮಂಡಳಿ ಪೀಠಾಧ್ಯಕ್ಷರಾಗಿರುವ ಅವರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಗಬೇಕೆಂಬ ಅಭಿಲಾಷೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲೇ ಭೇಟಿಯಾಗಿ ಶುಭಾಶಯ ತಿಳಿಸಿ ತೆರಳಿದ್ದಾರೆ.
ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವುದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ. ಈಡಿಗ ಸಮಾಜಕ್ಕೆ ಏಳು ಟಿಕೆಟ್ ನೀಡಿದ್ದಾರೆ. ಅದರಲ್ಲಿ ನಾಲ್ಕು ಜನ ಗೆದ್ದಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಸಿಎಂ ಯಾರು ಆಗಬೇಕು ಅಂತ ನಾನು ಹೇಳೋದಿಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಇಬ್ಬರೂ ಒಂದೇ ನಮಗೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ದೊಡ್ಡ ಪಾತ್ರ ಇದೆ. ಬಿ.ಕೆ. ಹರಿಪ್ರಸಾದ್ ಕೂಡ ಹಿರಿಯರು ಇದ್ದಾರೆ. ಅವರನ್ನೂ ಪರಿಗಣಿಸಬೇಕು ಎಂದರು.
ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ ರುದ್ರಪ್ಪ ಲಮಾಣಿ ಮಾತನಾಡಿ, ಹೈಕಮಾಂಡ್ ತೀರ್ಮಾನವೇ ಅಂತಿಮ. ಎಲ್ಲ ಶಾಸಕರು ಹೈಕಮಾಂಡ್ ನಾಯಕರ ಅಭಿಪ್ರಾಯಕ್ಕೆ ಬದ್ಧ. ನಮ್ಮ ಒಲವು ಕಾಂಗ್ರೆಸ್ ಪರವಾಗಿದೆ ಎಂದಿದ್ದಾರೆ. ಶಾಸಕ ಕೆ ಎನ್ ರಾಜಣ್ಣ ಕೂಡ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಹೆಚ್ ಸಿ ಮಹಾದೇವಪ್ಪ, ಶಿವಲಿಂಗೇಗೌಡ ಸೇರಿ ಹಲವರು ಇದೇ ವೇಳೆ ಅವರ ನಿವಾಸದತ್ತ ಆಗಮಿಸಿದ್ದಾರೆ. ಶಾಸಕ ಹೆಚ್ ಸಿ ಮಹಾದೇವಪ್ಪ ಮಾತನಾಡಿ, ಸಿಎಂ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಇಂದು ಸಿಎಂ ಯಾರೆಂದು ವರಿಷ್ಠರು ತೀರ್ಮಾನ ಮಾಡ್ತಾರೆ. ಇಂದು ಸಂಜೆ ಒಳಗೆ ಸಿಎಂ ಆಯ್ಕೆಯಾಗುತ್ತದೆ ಎಂದರು.
ಜಮೀರ್ ಅಹ್ಮದ್ಗೆ ಡಿಸಿಎಂ ಸ್ಥಾನಕ್ಕೆ ಬೆಂಬಲಿಗರ ಲಾಭಿ ನಡೆದಿದೆ. ಸಿದ್ದರಾಮಯ್ಯ ಮನೆ ಮುಂದೆ ಜಮೀರ್ ಬೆಂಬಲಿಗರು ಡಿಸಿಎಂ ಸ್ಥಾನಕ್ಕೆ ಒತ್ತಾಯಿಸಿ ಘೋಷಣೆ ಕೂಗಿದ್ದಾರೆ. ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ್ದ ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ಇಬ್ಬರಿಗೂ ಅವಕಾಶ ಸಿಗಬೇಕು ಎಂಬುದು ಶಾಸಕರ ಅಭಿಪ್ರಾಯ ಇತ್ತು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ಪಕ್ಷದ ಪರವಾಗಿ ಇರುವವರು. ಮೊದಲು ಸಿಎಂ ಆಯ್ಕೆ ಮುಗಿಯಲಿ. ಆ ನಂತರ ಸಚಿವರ ಆಯ್ಕೆಯಾಗುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದರು.
ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕೊಡದೇ ಇನ್ಯಾರಿಗೆ ಕೊಡ್ತಾರೆ. ನಾನು ಸಿದ್ದರಾಯ್ಯಗೆ ವೋಟ್ ಹಾಕಿದ್ದೀನಿ. ಒಕ್ಕಲಿಗ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಸಾಮಾನ್ಯ ವ್ಯಕ್ತಿ ಕೂಡ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಬೇರೆ ಶಾಸಕರ ಅಭಿಪ್ರಾಯ ನಂಗೆ ಗೊತ್ತಿಲ್ಲ. ನನಗೆ ಸಿದ್ದರಾಮಯ್ಯನವ್ರೇ ಸಿಎಂ ಆಗಬೇಕು ಎಂದು ತಿಳಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಕ್ಷದ ವರಿಷ್ಠರು ನಿರ್ಧಾರ ಮಾಡ್ತಾರೆ. ಯಾರನ್ನು ಸಿಎಂ ಮಾಡಿದ್ರೆ ರಾಜ್ಯದಲ್ಲಿ ಆಡಳಿತ ಮಾಡಬಹುದು ಗೊತ್ತಿದೆ. ಜನರು ವಿಶ್ವಾಸದಲ್ಲಿ ನಮ್ಮ ಕೈ ಹಿಡಿದಿದ್ದಾರೆ. ಹೈಕಮಾಂಡ್ ಬದ್ಧತೆ ಉಳಿಸಿಕೊಂಡಿದ್ದೇವೆ. ನಾನು ಕೂಡ ಖಂಡಿತಾ ಸಚಿವ ಸ್ಥಾನ ಆಕಾಂಕ್ಷಿ. ಟಗರು ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗಿನಿಂದ ಹುಟ್ಟುಹಬ್ಬದ ಹಿನ್ನೆಲೆ ಮನೆಯಲ್ಲೇ ಇದ್ದರು. ಅವರನ್ನು ಭೇಟಿಯಾಗಲು ಅಭಿಮಾನಿಗಳು ಮನೆ ಬಳಿ ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಕಾರ್ಯಕರ್ತರು ಡಿಕೆಶಿಗೆ ಶುಭಾಶಯ ತಿಳಿಸಲು ಮನೆ ಒಳಗಡೆ ಹೋಗಲು ಹರಸಾಹಸ ಪಟ್ಟರು. ಡಿಕೆ ಶಿವಕುಮಾರ್ ಭೇಟಿ ಮಾಡಲು ಕಾರ್ಯಕರ್ತರಿಂದ ಪೈಪೋಟಿ ಸಂದರ್ಭ ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಡಿಕೆಶಿ ಕೂಡ ದೆಹಲಿಗೆ ಪಯಣ: ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಅಭಿಮಾನಿಗಳು 65 ಕೆ.ಜಿ. ತೂಕದ ಕೇಕ್ ಹಿಡಿದು ಬಂದಿದ್ದರು. ಆದರೆ ಶ್ರಮಪಟ್ಟು ಮನೆಯ ಒಳಗೆ ಕೊಂಡೊಯ್ದ ಕೇಕ್ ಅನ್ನು ಡಿಕೆಶಿ ವಾಪಸ್ ಕಳಿಸಿದ್ದಾರೆ. ನಿವಾಸದಲ್ಲಿ ಕೇಕ್ ಕತ್ತರಿಸಲು ನಿರಾಕರಿಸಿದ ಅವರು ಶಾಂಗ್ರಿಲಾ ಹೋಟೆಲ್ಗೆ ಬರುವಂತೆ ಸೂಚಿಸಿ ಕಳುಹಿಸಿದರು. ಇದರಿಂದ ನಿರಾಸೆಗೊಂಡ ಡಿಕೆ ಶಿವಕುಮಾರ್ ಬೆಂಬಲಿಗರು ಶಾಂಗ್ರಿ-ಲಾ ಹೋಟೆಲ್ನತ್ತ ಸಾಗಿದರು. ಆದರೆ ಡಿಕೆಶಿ ಹೋಟೆಲ್ ಕಡೆ ತೆರಳುವ ಬದಲು ಏರ್ಪೋರ್ಟ್ ರಸ್ತೆಯತ್ತ ಮುಖ ಮಾಡಿದ್ದಾರೆ. ಸದ್ಯ ಸಂಜೆ 4 ಗಂಟೆಗೆ ಅವರೂ ಸಹ ದಿಲ್ಲಿಗೆ ತೆರಳುತ್ತಾರೆ ಎಂಬ ಮಾಹಿತಿ ಇದೆ. ಸದ್ಯ ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ಗೆ ತೆರಳಿ ಅಲ್ಲಿ ಕೆಲ ಬೆಂಬಲಿಗರ ಜತೆ ಚರ್ಚಿಸಿ ದಿಲ್ಲಿಗೆ ಪ್ರಯಾಣಿಸಲಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಶಾಂಗ್ರಿಲಾ ಹೋಟೆಲ್ನಲ್ಲಿ ಒಂದು ಸುತ್ತು ಆಪ್ತರ ಜತೆ ಸಮಾಲೋಚಿಸಿರುವ ಡಿಕೆಶಿ ದಿಲ್ಲಿಯತ್ತ ಮುಖ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರ ತೀವ್ರ ಕಗ್ಗಂಟಾಗಿರುವ ಹಿನ್ನೆಲೆ ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ದಿಲ್ಲಿಗೆ ಬುಲಾವ್ ಕೊಟ್ಟಿದೆ. ಸಿದ್ದರಾಮಯ್ಯ ಮಧ್ಯಾಹ್ನ 1 ಗಂಟೆಗೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ ತೆರಳಿದ್ದಾರೆ. ಇದೀಗ ಅವರ ಬೆನ್ನಲ್ಲೇ ಸಂಜೆ 5.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಹ ದಿಲ್ಲಿಗೆ ತೆರಳುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಮುಂದಿನ ಸಿಎಂ ಸ್ಥಾನಕ್ಕೆ ಪ್ರಭಲ ಪೈಪೋಟಿ ನಡೆದಿದ್ದು, ಇದನ್ನು ಸುಸೂತ್ರವಾಗಿ ಬಗೆಹರಿಸುವ ಪ್ರಯತ್ನ ನಡೆಸಿದೆ. ಆದರೆ ಅದರಲ್ಲಿ ಎಷ್ಟು ಫಲ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ದೆಹಲಿಯತ್ತ ಸಿದ್ದರಾಮಯ್ಯ ಪ್ರಯಾಣ: ನಿಗದಿಯಾಗದ ಡಿ.ಕೆ.ಶಿವಕುಮಾರ್ ಪ್ರವಾಸ