ಬೆಂಗಳೂರು : ವೆಬ್ಸೈಟ್ಗಳನ್ನ ಪರಿಶೀಲಿಸುವಾಗ ಜನರಿಗೆ ಎಚ್ಚರವಿರಲಿ.. ಯಾಕೆಂದರೆ, ರಾಜಧಾನಿಯ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯ ವೆಬ್‌ಸೈಟ್ ಹೋಲುವ ಫೇಕ್ ವೆಬ್‌ಸೈಟ್ ಪ್ರಾರಂಭವಾಗಿದೆ. ಸ್ವಲ್ಪ ಯಾಮಾರಿದರೂ ನೀವು ಹಣ ಕಳೆದುಕೊಳ್ಳುವುದು ಗ್ಯಾರಂಟಿ ಎನ್ನುವಂತಿದೆ. ಖಾಸಗಿ ಆಸ್ಪತ್ರೆ ಹೆಸರಲ್ಲಿ ಅಂಗಾಂಗಗಳನ್ನು ಸೇಲ್ ಮಾಡೋದಾಗಿ ಪೋಸ್ಟ್ ಹಾಕಿ, ಕಿಡ್ನಿ ಖರೀದಿ ಮಾಡುತ್ತೇವೆ, ಮಾರಾಟ ಮಾಡುತ್ತೇವೆ ಎಂದು ವೆಬ್‌ಸೈಟ್ ಹೇಳುತ್ತಿದೆ.
ಮಣಿಪಾಲ್ ಆಸ್ಪತ್ರೆಯ ವೆಬ್‌ಸೈಟ್ ಹೋಲುವ ಫೇಕ್ ವೆಬ್ಸೈಟ್ನಲ್ಲಿ ಅಂಗಾಂಗಗಳ ಮಾರಾಟ ಜಾಹೀರಾತು ಜೋರಾಗಿದೆ. ಅಕ್ರಮವಾಗಿ ಕಿಡ್ನಿ ಮಾರಾಟದ ಬಗ್ಗೆ ವೆಬ್ಸೈಟ್ನಲ್ಲಿ ವಿವರವಾಗಿ ತಿಳಿಸಲಾಗಿದೆ. ಕಿಡ್ನಿಯನ್ನು ಕೊಳ್ಳುತ್ತೇವೆ ಮತ್ತು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಲಾಗಿದೆ. 5 ಕೋಟಿ ರೂಪಾಯಿಗೆ ಕಿಡ್ನಿ ತೆಗೆದುಕೊಳ್ಳುವುದಾಗಿ ಫೇಕ್ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
2.5 ಕೋಟಿ ರೂ. ಅಡ್ವಾನ್ಸ್ ನೀಡಿ, ಸರ್ಜರಿಯಾದ ನಂತರ ₹2.5 ಕೋಟಿ ನೀಡುವ ಆಫರ್ ನೀಡಲಾಗಿದೆ. ಮಣಿಪಾಲ್ ಆಸ್ಪತ್ರೆಯ ಪ್ರತಿಷ್ಠಿತ ವೈದ್ಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಕಿಡಿಗೇಡಿಗಳು.
ಡಾ.ಥಾಮಸ್ ಜಾನ್ಸನ್ ಎಂಬ ಅಪರಿಚಿತ ವ್ಯಕ್ತಿಯ ಹೆಸರಲ್ಲಿ ವೆಬ್‌ಸೈಟ್ ಬಳಕೆಯಾಗುತ್ತಿದೆ. ಇದರಿಂದ ಮಣಿಪಾಲ್ ಆಸ್ಪತ್ರೆ ಹೆಸರಿಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ನಿರಂಜನ್ ದೂರು ನೀಡಿದ್ದಾರೆ. ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ಡಾ. ನಿರಂಜನ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.