ಬೆಂಗಳೂರು: ರಾಜಧಾನಿಯಲ್ಲಿ ನಕಲಿ ನೋಟುಗಳ ಹಾವಳಿ ಮುಂದುವರೆದಿದ್ದು, ಅಸಲಿಯಂತೆ ಕಾಣುವ ಗರಿ-ಗರಿ ನೋಟು ನೀಡಿ ಯಾಮಾರಿಸುತ್ತಿದ್ದ ಗ್ಯಾಂಗ್ ಮುನ್ನೆಲೆಗೆ ಬಂದಿದೆ. ನಕಲಿ ನೋಟು ನೀಡಿ ಬ್ಯಾಂಕ್ ಗೆ ವಂಚಿಸಿದ್ದ ಖತರ್ನಾಕ್ ಲೇಡಿ ತಿಲಕ್ ನಗರ ಪೊಲೀಸರ ಅತಿಥಿಯಾಗಿದ್ದಾರೆ.
ಜಯನಗರದ 9ನೇ ಬ್ಲಾಕ್ನ ಕರ್ನಾಟಕ ಬ್ಯಾಂಕ್ ಶಾಖೆಗೆ ಇದೇ ತಿಂಗಳು 10ರಂದು ಗ್ರಾಹಕರ ಸೋಗಿನಲ್ಲಿ ಬ್ಯಾಂಕ್ ಗೆ ಚಾಲಾಕಿ ಎಂಟ್ರಿ ಕೊಟ್ಟಿದ್ದಾರೆ. ಮಹಿಳೆಯು ಜನಸಂದಣಿಯಲ್ಲಿ ಹಣ ಡೆಪಾಸಿಟ್ ಮಾಡುವ ನೆಪದಲ್ಲಿ ಫೇಕ್ ಕರೆನ್ಸಿ ನೀಡಿ ವಂಚಿಸಿದ್ದ ಶೀಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಸ್ಟಮರ್ ನೆಪದಲ್ಲಿ ಬ್ಯಾಂಕ್ಗೆ ಬಂದು ಹಣ ಠೇವಣಿ ಮಾಡುವ ಸೋಗಿನಲ್ಲಿ ಬಂದು 100 ರೂಪಾಯಿ ಮುಖಬೆಲೆಯ 10 ಸಾವಿರ ನಕಲಿ ನೋಟುಗಳನ್ನು ನೀಡಿ ಹೆಚ್ಚು ಮುಖಬೆಲೆಯ ನೋಟುಗಳನ್ನು ನೀಡುವಂತೆ ಕೇಳಿದ್ದಾರೆ. ಹಣ ಸ್ವೀಕರಿಸಿದ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ನಕಲಿ ನೋಟು ಇದಾಗಿದೆ ಎಂಬುದು ಗೊತ್ತಾಗಿದೆ.
ಈ ಬಗ್ಗೆ ಮಹಿಳೆಗೆ ಪ್ರಶ್ನಿಸಿದಾಗ ಯಾವುದೇ ಉತ್ತರವಿಲ್ಲದೆ ಅಲ್ಲಿಂದ ಕಾಲ್ಕಿತ್ತಿದ್ದರು. ಈ ಸಂಬಂಧ ಬ್ಯಾಂಕ್ ಸಿಬ್ಬಂದಿ ನಾಗರಾಜ್ ಉಡುಪ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ನಕಲಿ ಕೀ ಬಳಸಿ ಕಳ್ಳತನ.. 48ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು