ಬೆಂಗಳೂರು : ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ 'ತನ್ನನ್ನು ಬಾಂಬ್ ಸ್ಫೋಟಿಸಿ ಸಾಯಿಸುವ ಯತ್ನ ನಡೆಯುತ್ತಿದೆ' ಎನ್ನುವ ಮೂಲಕ ಆತಂಕ ಸೃಷ್ಟಿಸಿದ್ದ ಸುನಿಲ್ ಕುಮಾರ್ ಎಂಬಾತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 4ರಂದು ಬೆಳಗ್ಗೆ 11:15ರ ಸುಮಾರಿಗೆ ಕರೆ ಮಾಡಿದ್ದ ಸುನಿಲ್ ಕುಮಾರ್ ಎಂಬಾತ ಒಂದೇ ಸಮನೆ 'ಪ್ರಶಾಂತ್ ಎಂ.ಬಾಲಕೃಷ್ಣ ಎಂಬಾತ ಪಾಕಿಸ್ತಾನಿ ಭಯೋತ್ಪಾದಕ ಅವನ ವಿರುದ್ಧ ದೆಹಲಿ, ಬೆಂಗಳೂರು, ಕೊಯಮತ್ತೂರಿನಲ್ಲಿ ಪ್ರಕರಣಗಳಿವೆ. ಆತ ನನ್ನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದಾನೆ. ಬಾಂಬ್ ನಿಂದ ಬೆಂಗಳೂರು ಬ್ಲಾಸ್ಟ್ ಮಾಡ್ತಾನೆ' ಎಂದಿದ್ದಾನೆ.
ಇದರಿಂದ ತಕ್ಷಣ ಎಚ್ಚೆತ್ತ ಕಂಟ್ರೋಲ್ ರೂಮ್ ಸಿಬ್ಬಂದಿ ಕರೆ ಬಂದ ಸ್ಥಳಕ್ಕೆ ಪೊಲೀಸರನ್ನು ಕಳಿಸಿದ್ದಾರೆ. ಆದರೆ ಸ್ಥಳಕ್ಕೆ ಹೋಗಿ ಪೊಲೀಸರು ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದ್ದು, ಕರೆ ಮಾಡಿದವನು ಯಾರು? ಯಾವ ಕಾರಣಕ್ಕಾಗಿ ಕರೆ ಮಾಡಿದ್ದ? ಆತನ ಉದ್ದೇಶ ಏನು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಕಮ್ಯಾಂಡ್ ಸೆಂಟರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿರುವ ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ ಇ ಮೇಲ್, ಜಿಲೆಟಿನ್ ಕಡ್ಡಿ ಹುಸಿ ಸಂದೇಶ: ಸುಳ್ಳು ಸುದ್ದಿ ಎಂದ ಡಿಸಿಪಿ
ಹೆಚ್ಚುತ್ತಿರುವ ಹುಸಿ ಬೆದರಿಕೆ ಕಾಲ್ಗಳು: ಪ್ರಾಂಕ್ ಕಾಲ್ಗಳು ಹೊಸದೇನಲ್ಲ, ಈ ತರಹದ್ದು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಸಮಾಜಕ್ಕೆ ದುಷ್ಪರಿಣಾಮ ಬೀರುವಂತಹ ಕರೆಗಳು ಬಂದಾಗ ಪೊಲೀಸರು ನಿರ್ಲಕ್ಷ್ಯ ವಹಿಸುವಂತಿಲ್ಲ. ಅದರಲ್ಲೂ ಬೆಂಗಳೂರಿನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಇಂತಹ ಬೆದರಿಕೆಯ ಹುಸಿ ಕಾಲ್ಗಳು ಅತೀ ಹೆಚ್ಚು. ನಿನ್ನೆ ಮೊನ್ನೆಯಷ್ಟೇ ರಾಜಾಜಿನಗರದಲ್ಲಿರುವ ಎನ್ಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಸಂದೇಶ ಬಂದಿತ್ತು. ಇದರಿಂದ ಬೆಚ್ಚಿಬಿದ್ದ ಶಾಲಾ ಅಡಳಿತ ಮಂಡಳಿ ಪೊಲೀಸರಿಗೆ ದೂರನ್ನು ನೀಡಿದ್ದರು. ಪೊಲಿಸರ ತನಿಖೆಯ ನಂತರ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ.
ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ರಾಜಾಜಿನಗರದಲ್ಲಿರುವ ಎನ್ಪಿಎಸ್ ಶಾಲೆಗೆ ಬಾಂಬ್ ಇ ಮೇಲ್ ಸಂದೇಶ ಬಂದ ಕೂಡಲೇ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿಯು ಕೂಡಲೇ ಶಾಲಾ ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿತ್ತು. ನಂತರ ದೂರು ನೀಡಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಬಂದು ಶಾಲೆ ಪೂರ್ತಿ ತಪಾಸಣೆ ನಡೆಸಿದ ನಂತರ ಇದು ಸುಳ್ಳು ಎಂದು ತಿಳಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಡುವಂತಾಗಿತ್ತು.
ಬೆಂಗಳೂರಿನ ಏರ್ಪೋರ್ಟ್ಗೆ ಬಾಂಬ್: ಇನ್ನು ಇದೇ ರೀತಿಯಾಗಿ ಸ್ವಲ್ಪ ದಿನಗಳ ಹಿಂದೆ ಬೆಂಗಳೂರಿನ ಏರ್ಪೋರ್ಟ್ಗೆ ಬಾಂಬ್ ಹಾಕುವುದಾಗಿ ಟ್ವೀಟ್ ಮಾಡಿದ್ದರು. ಇವರನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದರು. ಆಂಗ್ಲ ಭಾಷೆಯಲ್ಲಿ ಆರೋಪಿ "ನಾನು ಬೆಂಗಳೂರು ಏರ್ಪೋಟ್ಗೆ ಬಾಂಬ್ ಹಾಕುತ್ತೆನೆ" ಎಂದು ಟ್ವೀಟ್ ಮಾಡಿದ್ದ. ನಂತರ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿದ ನಂತರ ಆರೋಪಿಯನ್ನು ಪತ್ತೆ ಹಚ್ಚಿದ್ದು, ಆತ ಬೆಂಗಳೂರಿನ ಕೂಡ್ಲುಗೇಟ್ ನಿವಾಸಿ ವೈಭವ್ ಗಣೇಶ್ ಎಂಬಾತ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಹಿಟ್ ಆ್ಯಂಡ್ ರನ್.. ಆಟೋಕ್ಕೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವು