ಬೆಂಗಳೂರು: ಸಾಮಾಜಿಕ ತಾಣದಲ್ಲಿ ವಿಡಿಯೋ ಕಾಲ್ ಮೂಲಕ ಅಶ್ಲೀಲ ದೃಶ್ಯ ಸೆರೆಹಿಡಿದು, ಬ್ಲ್ಯಾಕ್‌ಮೇಲ್ ಮಾಡಿ ಯುವಕನ ಆತ್ಮಹತ್ಯೆಗೆ ಕಾರಣರಾದ ರಾಜಸ್ಥಾನದ ಇಬ್ಬರು ಸೈಬರ್ ಸುಲಿಗೆಕೋರರನ್ನು ಕೆ.ಆರ್. ಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ಭಾರತದಲ್ಲಿ ಅತಿಹೆಚ್ಚು ಸೈಬರ್ ಕ್ರೈಮ್ ನಡೆಯುವ ರಾಜಸ್ಥಾನದ ಭರತ್‌ಪೂರ ಜಿಲ್ಲೆ ಕೈತವಾಡ ನಗರದ ರಸೂಲಪೂರ್ ಗ್ರಾಮದ ರಾಬಿನ್ ಮತ್ತು ಜಾವೇದ್ ಎಂದು ಗುರುತಿಸಲಾಗಿದೆ. ಇವರನ್ನ ಕೆ.ಆರ್ ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಂಗಯ್ಯ ನೇತೃತ್ವದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 23 ರಂದು ಈ ಇಬ್ಬರ ಬ್ಲ್ಯಾಕ್‌ಮೇಲ್‌ಗೆ ನೊಂದು ಭಟ್ಟರಹಳ್ಳಿಯ ಎಂಬಿಎ ಪದವೀಧರ ಬಿ.ಎಸ್. ಅವಿನಾಶ್ ಅಲಿಯಾಸ್ ಅಭಿ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಎಂ. ಅಂಬರೀಶ್ ನೇತೃತ್ವದ ತಂಡ ಒಂದು ತಂಡವನ್ನು ರಚಿಸಿ ರಾಜಾಸ್ಥಾನದ ಭರತ್ ಪುರ ಗ್ರಾಮಕ್ಕೆ ಕಳುಹಿಸಿ ಸಾಕಷ್ಟು ಪರಿಶ್ರಮ ಪಟ್ಟು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಏನಿದು ಘಟನೆ...
ಎಂಬಿಎ ಪದವಿ ಮುಗಿಸಿ ಅವಿನಾಶ್, ಐಎಎಸ್ ಪ್ರಿಲೀಮ್ಸ್ ಪಾಸ್ ಮಾಡಿ ಕೆ.ಆರ್.ಪುರದಲ್ಲಿ ಐಎಎಸ್ ಕೋಚಿಂಗ್‌ಗೆ ಹೋಗುತ್ತಿದ್ದ.ಇದರ ನಡುವೆ ನೇಹಾ ಶರ್ಮ ಎಂಬ ಯುವತಿ ಹೆಸರಿನಲ್ಲಿ ರಾಬಿನ್ ಮತ್ತು ಜಾವೇದ್ ಫೇಸ್‌ಬುಕ್ ಖಾತೆ ತೆರೆದು ಅವಿನಾಶ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸ್ನೇಹ ಬೆಳೆಸಿದ್ದರು.

ಮೆಸೆಂಜರ್‌ನಲ್ಲಿ ಚಾಟ್ ಶುರು ಮಾಡಿ ಆತ್ಮೀಯತೆ ಬೆಳೆಸಿಕೊಂಡು ಹುಡುಗಿಯಂತೆ ಸಂಭಾಷಣೆ ಮಾಡಿ ಅವಿನಾಶ್‌ಗೆ ನಂಬಿಸಿದ್ದರು. ಅಶ್ಲೀಲ ಸಂಭಾಷಣೆ ಚಿತ್ರಗಳನ್ನು ಕಳುಗಿಸುತ್ತಿದ್ದ ವಂಚಕರು, ವಿಡಿಯೋ ಕಾಲ್ ಮಾಡಿ ಮತ್ತೊಂದು ಮೊಬೈಲ್‌ನಲ್ಲಿ ಅಶ್ಲೀಲ ವೆಬ್ ಸೈಟ್ನ ಯುವತಿ ನಗ್ನ ವಿಡಿಯೋವನ್ನು ತೋರಿಸಿದ್ದರು. ಅವಿನಾಶ್‌ಗೂ ಬಟ್ಟೆ ಬಿಚ್ಚುವಂತೆ ಪ್ರೇರೆಪಿಸಿ ನಗ್ನ ಮಾಡಿ ಸ್ಕ್ರೀನ್ ರಿಕಾರ್ಡ್ ಮಾಡಿಕೊಂಡಿದ್ದರು.
ಬಳಿಕ ಅವಿನಾಶ್‌ಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಖಾಸಗಿ ವಿಡಿಯೋ ಕಳುಹಿಸಿ ಬ್ಲ್ಯಾಕ್‌ಮೇಲ್‌ಗೆ ಶುರು ಮಾಡಿದ್ದರು. ಹಣ ಕೊಡದಿದ್ದರೇ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ನಿಮ್ಮ ಕುಟುಂಬ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ದೃಶ್ಯಗಳನ್ನು ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಹೆದರಿ ಅವಿನಾಶ್, ಸ್ನೇಹಿತರ ಬಳಿಕ ಸಾಲ ಮಾಡಿ ಸಾವಿರಾ ರೂಪಾಯಿಗಳನ್ನು ಕಳುಹಿಸಿದ್ದನು. ಸೂಮಾರು 36 ಸಾವಿರ ರೂಪಾಯಿ ಸುಲಿಗೆಕೋರರು ತಮ್ಮ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಜಮೆ ಮಾಡಿಕೊಂಡಿದ್ದಾರೆ.
ಸೈಬರ್ ಕಳ್ಳರು ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿದ್ದಾರೆ. ಹಣ ಇಲ್ಲ ಎಂದು ಹೇಳಿದಾಗ ಆರೋಪಿಗಳು ಅವಿನಾಶ್‌ಗೆ ಅಶ್ಲೀಲ ವಿಡಿಯೋವನ್ನು ಜಾಲತಾಣ ಮತ್ತು ನಿಮ್ಮ ಸ್ನೇಹಿತರ, ಕುಟುಂಬ ಸದಸ್ಯರ ವಾಟ್ಸಾಪ್ಗೆ ಕಳುಹಿಸುವುದಾಗಿ ಕಿರುಕುಳ ನೀಡುತ್ತಿದ್ದರು. ನೊಂದ ಅವಿನಾಶ್ ಮಾರ್ಚ್ 23ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಬೆಳಗ್ಗೆ ಮಗನ ಸಾವಿನಿಂದ ಪಾಲಕರು ಆಘಾತಕ್ಕೆ ಒಳಗಾಗಿದ್ದರು. ಸ್ನೇಹಿತನ ಸಾವಿನ ಸುದ್ದಿ ತಿಳಿದು ಮನೆಯ ಬಳಿ ಬಂದಿದ್ದರು. ಈ ವೇಳೆ ಅವಿನಾಶ್ ತುರ್ತಾಗಿ ಹಣ ಪಡೆದಿದ್ದ ಎಂದು ಪಾಲಕರ ಬಳಿ ಆತನ ಗೆಳೆಯರು ತಿಳಿಸಿದ್ದರು. ಅವಿನಾಶ್ ಸಾವಿನ ಮೇಲೆ ಪಾಲಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ಮಾರ್ಚ್ 25ರ ಸಂಜೆ 4 ಗಂಟೆಗೆ ಅವಿನಾಶ್ ಸಹೋದರಿ ಫೇಸ್‌ಬುಕ್ ಖಾತೆಗೆ ನೇಹಾ ಶರ್ಮಾ ಹೆಸರಿನಲ್ಲಿ ಆರೋಪಿಗಳು ಸಂದೇಶ ಕಳುಹಿಸಿ, ಮೊಬೈಲ್ ನಂಬರ್ ಕೇಳಿದ್ದರು. ಅನುಮಾನ ಬಂದು ಮೃತನ ಅಕ್ಕ, ತಮ್ಮನ ನಂಬರ್ ಬದಲಿಗೆ ಅಕ್ಕನ ಮಗನ ಮೊಬೈಲ್ ನಂಬರ್ ಕೊಟ್ಟಿದ್ದರು. ಅವಿನಾಶ್ ಎಂದು ತಿಳಿದು ಅನಿಲ್ ಜತೆಗೆ ಸುಲಿಗೆಕೋರರ ಅಶ್ಲೀಲ ವಿಡಿಯೋ ಬ್ಲ್ಯಾಕ್‌ಮೇಲ್ ಪ್ರಸ್ತಾಪಿಸಿ ಬ್ಲ್ಯಾಕ್‌ಮೇಲ್ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ತನಿಖೆ ಕೈಗೊಂಡು ಆರೋಪಿಗಳ ಫೇಸ್‌ಬುಕ್ ಮತ್ತು ಮೊಬೈಲ್ ನಂಬರ್ ಆಧರಿಸಿ ಬಂಧಿಸಿದ್ದಿವೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.