ಬೆಂಗಳೂರು: ನಿರೀಕ್ಷೆಯಂತೆ ರಾಜ್ಯ ಸರ್ಕಾರ ಕೆಲಸದ ಸಮಯವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶ ಸರ್ಕಾರದಂತೆ ರಾಜ್ಯ ಸರ್ಕಾರವೂ ಕೆಲಸದ ಸಮಯವನ್ನು ಏರಿಕೆ ಮಾಡಿದೆ. ಆದೇಶದಲ್ಲಿ 1948 ಕಾರ್ಖಾನೆ ಕಾಯ್ದೆಯಡಿ ನೋಂದಣಿಯಾದ ಎಲ್ಲಾ ಕಾರ್ಖಾನೆಗಳಲ್ಲಿನ ಕೆಲಸದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಇಂದಿನಿಂದ ಆಗಸ್ಟ್ವರೆಗೂ ಕೆಲಸದ ಸಮಯವನ್ನು ಏರಿಕೆ ಮಾಡಿ ಬದಲಾವಣೆ ಮಾಡಲಾಗಿದೆ.
![ಕೆಲಸದ ಅವಧಿ ವಿಸ್ತರಿಸಿ ಸರ್ಕಾರ ಅದೇಶ](https://etvbharatimages.akamaized.net/etvbharat/prod-images/kn-bng-03-workhour-changeorder-script-7201951_22052020213259_2205f_1590163379_977.jpg)
ಅದರಂತೆ ಈ ಮುಂಚಿನ 8 ಗಂಟೆಯ ಬದಲು 10 ಗಂಟೆಯವರೆಗೆ ಕೆಲಸದ ಅವಧಿಯನ್ನು ವಿಸ್ತರಿಸಲಾಗಿದೆ. ಈ ಆದೇಶದಲ್ಲಿ ಕಾರ್ಖಾನೆ ಕಾಯ್ದೆಯ ಸೆಕ್ಷನ್ 51 ರಿಂದ ವಿನಾಯಿತಿ ನೀಡಲಾಗಿದೆ. ಈ ಸೆಕ್ಷನ್ ಪ್ರಕಾರ ಯಾರೊಬ್ಬ ವಯಸ್ಕ ನೌಕರನೂ ಯಾವುದೇ ವಾರದಲ್ಲಿ 48 ತಾಸಿಗಿಂತ ಹೆಚ್ಚಿಗೆ ಕೆಲಸ ಮಾಡುವ ಹಾಗಿಲ್ಲ. ಇದೀಗ ಆ ಸೆಕ್ಷನ್‌ಗೆ ವಿನಾಯಿತಿ ನೀಡಲಾಗಿದೆ.
ಹೊಸ ಆದೇಶದ ಪ್ರಕಾರ ವಯಸ್ಕ ನೌಕರರು ಯಾವುದೇ ದಿನ 10 ತಾಸಿಗಿಂತ ಹೆಚ್ಚಿಗೆ ಮತ್ತು ಯಾವುದೇ ವಾರದಲ್ಲಿ 60 ತಾಸಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡುವ ಹಾಗಿಲ್ಲ. ಓಟಿ ವೇತನ ಕೊಡುವ ಬಗ್ಗೆ ಯಾವುದೇ ಬದಾವಣೆ ಮಾಡಲಾಗಿಲ್ಲ.
ರಾಜ್ಯ ಸರ್ಕಾರವೂ ರಾಜ್ಯದಲ್ಲಿ ನೌಕರರ ಕೆಲಸದ ಅವಧಿಯನ್ನು ವಿಸ್ತರಿಸಲು ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಉತ್ತರ ಪ್ರದೇಶ, ಮಧ್ಯ ಪ್ರದೇಶದಂತೆ ರಾಜ್ಯ ಸರ್ಕಾರವೂ ಕೆಲಸದ ಅವಧಿಯಲ್ಲಿ ಏರಿಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿತ್ತು. ಇದೀಗ ಆ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.