ಬೆಂಗಳೂರು: ಮುಖ್ಯಮಂತ್ರಿಗಳು ಮಾತು ಉಳಿಸಿಕೊಳ್ಳುತ್ತಾರೆ, ನನ್ನನ್ನು ಕೈ ಬಿಡುವ ಪರಿಸ್ಥಿತಿಯೇ ಬರಲ್ಲ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಕೈ ಬಿಡುವ ಸಂದರ್ಭ ಬಂದ್ರೆ ಆಗ ಮಾತನಾಡುತ್ತೇನೆ. ಸಿಎಂ ಯಡಿಯೂರಪ್ಪ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಯಾವುದೇ ಕಾರಣಕ್ಕೂ ನನ್ನನ್ನು ಕೈ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟದಿಂದ ನನ್ನನ್ನು ಕೈ ಬಿಡುವ ವಿಚಾರದ ಬಗ್ಗೆ ಹೈಕಮಾಂಡ್ ಮಾಡಿರುವ ತೀರ್ಮಾನದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಸಿಎಂ ಯಡಿಯೂರಪ್ಪ ಮಾತ್ರ ನನ್ನನ್ನು ಕೈ ಬಿಡುವುದಿಲ್ಲ ಪುನರುಚ್ಚರಿಸಿದ್ರು. ನನಗೆ ಪತ್ರಿಕೆಯಲ್ಲಿ ವಿಷಯ ನೋಡಿ ಶಾಕ್ ಆಯ್ತು ಎಂದ ಅವರು, ನೂರಕ್ಕೆ ನೂರರಷ್ಟು ನನ್ನನ್ನು ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸ ಇದೆ. ನನ್ನ ಇಲಾಖೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಅನೇಕ ಸುಧಾರಣೆ ಜಾರಿಗೆ ತಂದಿದ್ದೇನೆ. ಈ ಸರ್ಕಾರ ಬರಲು ನಾನು ಕಾರಣ. ಮೊದಲು ರಾಜೀನಾಮೆ ಕೊಟ್ಟವನು ನಾನು. ನಂತರ ಎಲ್ಲರೂ ಧೈರ್ಯ ಮಾಡಿ ಬಂದರು. ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ರು.
ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ. ಅವರು ಜನಪರ ಕೆಲಸ ಮಾಡ್ತಿದ್ದಾರೆ. ಯಾವಾಗಲೂ ನನ್ನ ಬೆಂಬಲ ಅವರಿಗೆ ಇರುತ್ತದೆ. ಬಿಎಸ್ವೈ ಮುಖ್ಯಮಂತ್ರಿ ಆಗಿರುವವರೆಗೂ ನನ್ನ ಬೆಂಬಲ ಅವರಿಗೆ ಇದ್ದೇ ಇರುತ್ತದೆ ಎಂದರು.
ಉಳಿದವರಿಗೂ ಮಂತ್ರಿ ಸ್ಥಾನ ಕೊಡಬೇಕು. ಶಂಕರ್, ಎಂಟಿಬಿ ನಾಗರಾಜ್ ಕೊಡುಗೆಯೂ ಸರ್ಕಾರ ರಚನೆಗೆ ಪ್ರಮುಖವಾಗಿದೆ. ಹೀಗಾಗಿ ಅವರಿಗೂ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆಗೆ 3+4 ಸೂತ್ರ..ಆಕಾಂಕ್ಷಿಗಳಿಂದ ಹೆಚ್ಚಿದ ಲಾಬಿ!