ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸ್ನೇಹಿತರನ್ನು ವಿಚಾರಣೆಗಾಗಿ ಸಿಸಿಬಿ ಪೊಲೀಸರು 9 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ವಿದೇಶದಿಂದ ಅಂಚೆ ಕಚೇರಿಗೆ ಪಾರ್ಸೆಲ್‌ನಲ್ಲಿ ಬಂದಿದ್ದ 500 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದ ಕೆಂಪೇಗೌಡ ಠಾಣೆ ಪೊಲೀಸರು, ಸುಜಯ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿಯಂತೆ ಸ್ನೇಹಿತರಾದ ಹೇಮಂತ್ ಹಾಗೂ ಸುನೇಶ್‌ನನ್ನು ಗೋವಾದಲ್ಲಿ ಸೆರೆಹಿಡಿಯಲಾಗಿತ್ತು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿಯನ್ನು ಬಂಧಿಸಿ, ವಿಚಾರಣೆಗಾಗಿ ಕೆಂಪೇಗೌಡ ನಗರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು.
ಇದರ ನಡುವೆಯೇ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ, ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ನಾಲ್ವರು ಆರೋಪಿಗಳನ್ನು ಮುಂದಿನ 9 ದಿನಗಳವರೆಗೆ ಸಿಸಿಬಿ ಕಸ್ಟಡಿಗೆ ನೀಡಿದೆ.ಆರೋಪಿಗಳಿಗೆ ಸಹಕಾರ ನೀಡುತ್ತಿದ್ದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೇಬಲ್ ಪ್ರಭಾಕರ್ ಎಂಬಾತನನ್ನು ಈಗಾಗಲೇ ಅಮಾನತು ಮಾಡಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಮೇಲ್ನೊಟಕ್ಕೆ ಗೊತ್ತಾಗಿದೆ ಎಂದು ಸಿಸಿಬಿ ಅಧಿರಿಗಳು ತಿಳಿಸಿದ್ದಾರೆ.ದರ್ಶನ್ ಭಾಗಿ ಬಗ್ಗೆ ಪುರಾವೆ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ದರ್ಶನ್ ಹಾಗೂ ಇತರೆ ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದ ನಂತರವೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.