ರಾಯಚೂರು: ಎಸ್ಎಸ್ಎಲ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬದಲಾದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್.ಗೋನಾಳ ಆದೇಶಿಸಿದ್ದಾರೆ.
ಕಾನಿಹಾಳದ ಶಿವಕುಮಾರ, ಕುರಕುಂದಾದ ಎಂ.ಈರಣ್ಣ ಹಾಗು ಹಂಚಿನಾಳ ಕ್ಯಾಂಪಿನ ಸುನೀತಾ ಅಮಾನತುಗೊಂಡಿರುವ ಶಿಕ್ಷಕರಾಗಿದ್ದಾರೆ.
ಘಟನೆಯ ವಿವರ:
ಈ ಶಿಕ್ಷಕರು ಕಳೆದ ತಿಂಗಳು ಜೂ.27 ರಂದು ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ನಡೆಯುತ್ತಿರುವಾಗ ಸಿಂಧನೂರಿನ ಶ್ರೀಕೃಷ್ಣದೇವರಾಯ ಪ್ರೌಢಶಾಲಾ ಕೇಂದ್ರದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಬೇಕಾದ ಪ್ರಶ್ನೆ ಪತ್ರಿಕೆ ನೀಡಿದ್ದರು. ಇದರಿಂದ ಹೊಸ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ, ಮರುಪರೀಕ್ಷೆ ಬರೆಸುವಂತೆ ಒತ್ತಾಯಿಸಿದ್ದರು.
ವಿದ್ಯಾರ್ಥಿಗಳ ಪಾಲಕರೂ ಸಹ ಶಿಕ್ಷಕರ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಈಟಿವಿ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಯ ಕುರಿತು ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಜಿಲ್ಲೆಯ ಉಪನಿರ್ದೇಶಕರಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.
ಮೇಲಧಿಕಾರಿಗಳ ಸೂಚನೆಯ ಮೇರೆಗೆ ರಾಯಚೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಸಿಂಧನೂರು ಬಿಇಒಗೆ ಘಟನಾ ಬಗ್ಗೆ ಪರಿಶೀಲಿಸಿ ವರದಿ ನೀಡಲು ಡಿಡಿಪಿಐ ಸೂಚನೆ ನೀಡಿದ್ದರು. ಈ ಸೂಚನೆಯ ಮೆರೆಗೆ ತನಿಖೆ ನಡೆಸಿದ ಬಿಇಒ ಪರೀಕ್ಷಾ ಕೇಂದ್ರದಲ್ಲಿ ಮೂವರು ಶಿಕ್ಷಕರು ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿತ್ತು. ಬಿಇಒ ವರದಿ ಆಧಾರದ ಮೇಲೆ ರಾಯಚೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಚ್ ಗೋನಾಳ ಅವರು ಮೂವರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇನ್ನೂ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆಗಿರುವ ತೊಂದರೆಯ ಕುರಿತಂತೆ ಈಟಿವಿ ಭಾರತದಲ್ಲಿ ‘ಮೊದಲ ಬಾರಿಯ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ: ರಾಯಚೂರಿನಲ್ಲಿ ಯಡವಟ್ಟು’ ಎನ್ನುವ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಅಲ್ಲದೇ ತೊಂದರೆಗೊಳಗಾದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮರುಪರೀಕ್ಷೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದರು.