ಕೆಆರ್ಪುರ/ಬೆಂಗಳೂರು: ಕೊರೊನಾ ಮೂರನೇ ಅಲೆ ಎದುರಿಸಲು ಸೂಕ್ತ ಕ್ರಮ ಜೊತೆಗೆ ಮಕ್ಕಳ ಚಿಕಿತ್ಸೆಗೆ ವಿಶೇಷ ಐಸಿಯು ಘಟಕ ಸ್ಥಾಪನೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ರಾಜ್ಯದಲ್ಲಿ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರಿನ ಕೆಆರ್ಪುರ ಕ್ಷೇತ್ರದ ಗೆದ್ದಲಹಳ್ಳಿ ರಾಜಕಾಲುವೆ, ಕಲ್ಕೆರೆ ಕೆರೆಗಳ ರಾಜಕಾಲುವೆಗಳಿಗೆ ಸಚಿವ ಬಿ.ಎ.ಬಸವರಾಜ್ ಮತ್ತು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯ್ಯತೆಯಿದ್ದು, ತಜ್ಞರ ಪ್ರಕಾರ ಮಕ್ಕಳಿಗೆ ಅಪಾಯವಿದೆ. ಹೀಗಾಗಿ ಉನ್ನತ ಮಟ್ಟದಲ್ಲಿ ಸರ್ಕಾರ ಚರ್ಚೆ ನಡೆಸುತ್ತಿದೆ. ಚಿಕಿತ್ಸೆಗಾಗಿ ಐಸಿಯು ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದರು.
ಕೊರೊನಾ ವರದಿ ತಡವಾಗಿ ನೀಡುತ್ತಿರುವ ಲ್ಯಾಬ್ಗಳ ಬಗ್ಗೆ ಮಾತನಾಡಿ, ಟೆಸ್ಟ್ ಮಾಡಿದ ಮರುದಿನವೇ ಶೇ. 80ರಷ್ಟು ಫಲಿತಾಂಶ ಸಿಗುತ್ತಿದೆ. ಶೇ. 20ರಷ್ಟು ಮಾತ್ರ ತಡವಾಗುತ್ತಿದೆ. ಕೆಲವು ಲ್ಯಾಬ್ಗಳು ತಡವಾಗಿ ವರದಿ ನೀಡುತ್ತಿವೆ. ಇದರಿಂದಲೂ ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗಿದೆ. ಇಂತಹ ಲ್ಯಾಬ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಲಾಕ್ಡೌನ್ ವಿಸ್ತರಣೆ ಕುರಿತು ತಜ್ಞರು, ಅಧಿಕಾರಿಗಳು ಮತ್ತು ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.