ಬೆಂಗಳೂರು : ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಗೆ ಜನಸಂಖ್ಯೆ ಮಿತಿ ನಿಗದಿ ಮಾಡುವ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಅತ್ಯಂತ ಮಹತ್ವದ ತಿದ್ದುಪಡಿಯನ್ನು ಪಂಚಾಯತ್ ಕಾಯ್ದೆಗೆ ತರಲು ಉದ್ದೇಶಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.
ಈ ವಿಧೇಯಕ ಚರ್ಚೆಗೆ ಬಂದ ಎರಡೂ ಸದನಗಳಲ್ಲಿ ಅಂಗೀಕಾರವಾದ ನಂತರ ರಾಜ್ಯದ ಜಿಲ್ಲಾ-ತಾಲೂಕು ಪಂಚಾಯತ್‌ಗಳಿಗೆ ದಾರಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ.
ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಜನಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೇ, ಜನಸಂಖ್ಯೆಯ ಅನುಪಾತದ ಉದ್ದೇಶಕ್ಕಾಗಿ ಮಲೆನಾಡು ಪ್ರದೇಶದಿಂದ ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕುಗಳನ್ನು ಕೈಬಿಡಲಾಗುವುದು.
ಪಂಚಾಯತ್ ವ್ಯವಸ್ಥೆಯ ಸದಸ್ಯನಾಗಲು ಅನರ್ಹ.. ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಒಳಗಾದವರು ಅಥವಾ ವಜಾಗೊಂಡಿರುವ ವ್ಯಕ್ತಿ, ಸಹಕಾರ ಸಂಘ ಮತ್ತು ಸಂಸ್ಥೆಗಳ ಸೇವೆಯಿಂದ ನಿವೃತ್ತರಾಗಿರುವವರು ಅಥವಾ ವಜಾಗೊಂಡವರು, ಸಹಕಾರ ಸಂಘ ಅಥವಾ ಸಂಸ್ಥೆಯ ಅಧ್ಯಕ್ಷ-ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿರುವ ವ್ಯಕ್ತಿ ಈ ಮೂರು ಹಂತದ ಪಂಚಾಯತ್ ವ್ಯವಸ್ಥೆಯ ಸದಸ್ಯನಾಗಲು ಅನರ್ಹ.
ಇವು ಕಾಯಿದೆಗೆ ತರಲಾಗಿರುವ ಪ್ರಮುಖ ತಿದ್ದುಪಡಿಗಳು. ಇದಲ್ಲದೇ, ತಿದ್ದುಪಡಿಯಿಂದಾಗಿ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ. ಸಂಬಂಧಪಟ್ಟ ನಗರಸಭೆ, ಪಾಲಿಕೆ ಅಥವಾ ಆಯಾ ಜಿಲ್ಲಾ ಕೇಂದ್ರದ ಪೌರಾಡಳಿತದ ಮೇಯರ್/ಅಧ್ಯಕ್ಷರು ಜಿಲ್ಲಾ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ.
ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ನಿಯುಕ್ತಿಗೊಳಿಸುವುದಾಗಿ ತಿದ್ದುಪಡಿ ವಿಧೇಯಕ ಹೇಳಿದೆ.
ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ.. ವಿಧೇಯಕ ಅಂಗೀಕಾರಕ್ಕೆ ಮುನ್ನ ನಡೆಯುವ ಚರ್ಚೆಯಲ್ಲಿ ಪಂಚಾಯತ್ ಸದಸ್ಯತ್ವಕ್ಕೆ ಅರ್ಹತೆ ನಿಗದಿ ಮತ್ತು ಜನಸಂಖ್ಯೆ ಪ್ರಮಾಣ ನಿಗದಿ ವಿಷಯಗಳು ಸಾಕಷ್ಟು ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಓದಿ: ಶಾಲೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ : ಸಮಿತಿ ರಚಿಸಿ, ಶಿಕ್ಷಣ ತಜ್ಞರ ಜತೆ ಚರ್ಚಿಸಿ ನಿರ್ಧಾರ ಎಂದ ಸಚಿವ ನಾಗೇಶ್