ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾರಾಟ ದಂಧೆಯನ್ನು ಮಟ್ಟಹಾಕುವಂತೆ ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಫಿಯಾವನ್ನು ಮುಲಾಜಿಲ್ಲದೇ ಮಟ್ಟಹಾಕಲೇಬೇಕು. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಆರೋಪ ಮಾಡಿ ಕೈ ತೊಳೆಯುವ ಬದಲು ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ಮಾಡಲಿ. ಯುವ ಜನಾಂಗವನ್ನು ವ್ಯಸನದಿಂದ ಕಾಪಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಕೆಪಿಸಿಸಿ ಮತ್ತೋರ್ವ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಮನವಿ ಮಾಡಿದ್ದು, ರಾಜ್ಯದ ಡ್ರಗ್ಸ್ ದಂಧೆಯನ್ನು ಮಟ್ಟಹಾಕಲು ವಿಶೇಷ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮದವರಿಗೆ ಮಾಹಿತಿ ನೀಡಿದ ಸಂದರ್ಭ ರಾಜ್ಯದ ಡ್ರಗ್ಸ್ ದಂಧೆಗೆ ಕಡಿವಾಣ ಬೀಳಲೇಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರು ಮೇಲಿಂದ ಮೇಲೆ ಡ್ರಗ್ಸ್ ಮಾಫಿಯಾ ವಿರುದ್ಧ ದನಿ ಎತ್ತಿದ್ದು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.