ಬೆಂಗಳೂರು: ದೇಶದ ಜಿಡಿಪಿ ದಯನೀಯ ಸ್ಥಿತಿ ತಲುಪಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಆ್ಯಕ್ಟ್ ಆಫ್ ಗಾಡ್ ಎನ್ನುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಈಗ ದೇಶದ ಆರ್ಥಿಕತೆಯನ್ನ ಇನ್ನಷ್ಟು ಪ್ರಪಾತಕ್ಕೆ ತಳ್ಳಿರುವುದು ಅಂಕಿ-ಅಂಶ ಸಮೇತವಾಗಿ ರುಜುವಾತಾಗಿದೆ. ದೇಶದ ಜಿಡಿಪಿ ಶೇ. 29.9ರಷ್ಟು ಋಣಾತ್ಮಕ ಕುಸಿತ ಕಂಡಿದ್ದು, ಇದು ಸಾರ್ವಕಾಲಿಕ ಕುಸಿತ ಎಂದೇ ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಿದ್ದೂ ದೇಶದಲ್ಲಿ ಎಲ್ಲವೂ ಸರಿ ಇದೆ ಎಂಬಂತೆ ಬಿಂಬಿಸುತ್ತಾ ಕೇವಲ ಚಪ್ಪಾಳೆ ಹೊಡೆದು ದೀಪ ಹಚ್ಚಿ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟು ಇನ್ನೆಷ್ಟು ದಿನ ಜನರನ್ನ ಕತ್ತಲಲ್ಲಿಡುತ್ತೀರಿ ಪ್ರಧಾನಿಗಳೇ..?? ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಿರ್ಮಲಾ ಸೀತಾರಾಮನ್ ಅವರೇ, ಕರುಣಾಮಯಿಯಾದ ಆ ದೇವರು ಇಷ್ಟೊಂದು ಆಟವಾಡಬಾರದಿತ್ತು. ನಿಮ್ಮ ದೈವಾಂಶ ಸಂಭೂತ ಮೋದಿಯವರಿಗೆ ತಾವೇ ದೇವರು ಎಂಬ ಭ್ರಮೆ ಬಿಟ್ಟು, ಸಾಧ್ಯವಾದರೆ ನಿಜವಾದ ದೇವರ ಬಳಿ ಮಾತಾಡಲು ಹೇಳಿ. ಇನ್ನಾದರೂ 'ದೇವರ ಆಟ' ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ!! ಎಂದಿದ್ದರು.
ಒಟ್ಟಾರೆ ರಾಜ್ಯಕ್ಕೆ ಜಿಎಸ್ಟಿ ಪಾಲು ನೀಡುವ ವಿಚಾರದಲ್ಲಿ ಹಿಂದೇಟು ಹಾಕಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದಲ್ಲಿ ದನಿಯೆತ್ತಿದ್ದು, ಇದೀಗ ಇವರ ಹೋರಾಟಕ್ಕೆ ಜಿಡಿಪಿ ಕುಸಿತ ಕೂಡ ಸಹಕಾರಿಯಾಗಿ ಲಭಿಸಿದೆ.