ಬೆಂಗಳೂರು: ಸಂಪುಟ ವಿಸ್ತರಣೆ ಕಸರತ್ತಿನಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಜನರು ಕೊರೊನಾ ಸೋಂಕಿನಿಂದ ಸಾಯುತ್ತಿರುವುದು ಕಾಣುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖಂಡ್ರೆ, ಕೊರೊನಾ ಬಗ್ಗೆ ನಿರ್ಲಕ್ಷ್ಯ ತಾಳಿ, ಸಾರ್ವಜನಿಕರ ಜೀವನದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ, ಪಿಟೀಲು ನುಡಿಸುತ್ತಿದ್ದ ಎಂಬಂತೆ ರಾಜ್ಯದಲ್ಲಿ ಜನ ಸೂಕ್ತ ಚಿಕಿತ್ಸೆ ಸಿಗದೆ ಸಾಯುತ್ತಿದ್ದರೂ ಮುಖ್ಯಮಂತ್ರಿ ಅವರು ಸಂಪುಟ ವಿಸ್ತರಣೆ ಕಸರತ್ತು ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ಜನ ವಿರೋಧಿ ಸರ್ಕಾರವನ್ನು ಹಿಂದೆಂದೂ ಕಂಡಿರಲಿಲ್ಲ. ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಚೆಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಮೇಲಿಂದಮೇಲೆ ಕೊರೊನಾ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸುತ್ತಿದ್ದು, ಜನರ ಸಾವಿನ ಬಗ್ಗೆ ಯಾವುದೇ ಕನಿಕರ ಇಲ್ಲದ ರೀತಿ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಆರೋಪಿಸುತ್ತಿದ್ದಾರೆ.