ಬೆಂಗಳೂರು: ಇತ್ತೀಚೆಗೆ ಕೇಂದ್ರ ಅರಣ್ಯ ಇಲಾಖೆ ಬಿಡುಗಡೆ ಮಾಡಿದ 'ಫಾರೆಸ್ಟ್ ಸರ್ವೇ ಆಫ್ ಇಂಡಿಯಾ' ಕರ್ನಾಟಕ ಕುರಿತು ನೀಡಿರುವ ವರದಿಯ ಸತ್ಯಾಸತ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಎರಡು ವರ್ಷದಲ್ಲಿ ಒಂದು ಸಾವಿರ ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳ ಆಗಿದೆ ಎಂಬ ವರದಿ ಬಂದಿದೆ. ಬೆಂಗಳೂರು ನಗರದಲ್ಲಿ 53 ಚ.ಕಿ.ಮೀ ಅರಣ್ಯ ಹೆಚ್ಚಳ ಸೇರಿದಂತೆ ರಾಜ್ಯದ ಇಪ್ಪತ್ತೈದು ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳ ಆಗಿದೆ ಎಂಬ ವರದಿ ಬಂದಿದೆ. ಆದರೆ ಪರಿಸರ ವಾದಿಗಳು, ಈ ಹಾಗೂ ಪರಿಸರ ತಜ್ಞರು ಈ ವರದಿಯನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಎರಡು ವರ್ಷದಲ್ಲಿ ಗಿಡ ನೆಟ್ಟು ಅರಣ್ಯವಾಗಲು ಸಾಧ್ಯವಿಲ್ಲ- ಸುರೇಶ್ ಹೆಬ್ಳೀಕರ್
ಇಕೋವಾಚ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಪರಿಸರ ತಜ್ಞರಾಗಿರುವ ಸುರೇಶ್ ಹೆಬ್ಳೀಕರ್ ಮಾತನಾಡಿ, ಅರಣ್ಯ ಪ್ರದೇಶ ಎಂದರೆ, ಸ್ವಾಭಾವಿಕವಾಗಿ ಬೆಳೆದ ಅರಣ್ಯವಾಗಿದ್ದು, ಅದು ಬೆಳೆಯಲು ಸಾವಿರಾರು ವರ್ಷಗಳು ಬೇಕು. ಎರಡು ವರ್ಷದಲ್ಲಿ ಗಿಡ ನೆಟ್ಟು ಅರಣ್ಯ ಮಾಡಲು ಸಾಧ್ಯವಿಲ್ಲ. ಅಥವಾ ಅರಣ್ಯಾಧಿಕಾರಿಗಳು ಒಂದೇ ಪ್ರಭೇದದ ಸಸಿ ನೆಟ್ಟು, ಸ್ಯಾಟಲೈಟ್ ಫೋಟೋ ತೆಗೆದು ತೋರಿಸಿದರೆ ಅದು ಅರಣ್ಯ ಪ್ರದೇಶ ಎಂದು ಆಗೋದಿಲ್ಲ ಎಂದರು.
ಸ್ವಾಭಾವಿಕವಾಗಿ ಬೆಳೆದ ಕಾಡಿನಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ಮಳೆ, ಮಣ್ಣಿನ ಪೋಷಕಾಂಶ ಉಳಿಯಲು ಸಾಧ್ಯ. ನೆರೆ ಪ್ರವಾಹ ತಡೆಯಲು ಸಾಧ್ಯ. ಸರ್ಕಾರ ಅರಣ್ಯ ಪ್ರದೇಶ ವಿಸ್ತರಣೆ ಆಗಿದೆ ಎಂದು ವರದಿ ನೀಡುತ್ತದೆ. ಆದರೆ ಸರಿಯಾದ ವರದಿ ಕೊಡಬೇಕಾದರೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ, ಗ್ರೌಂಡ್ ಲೆವೆಲ್ನಲ್ಲಿ ಅಧ್ಯಯನ ಆಗಬೇಕು. ಕೊಡಗಿನಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂಬ ವರದಿ ಇದೆ. ಆದರೆ ನೆರೆಹಾವಳಿಯಿಂದ ಸಾಕಷ್ಟು ಮರಗಿಡಗಳು ನಷ್ಟ ಆಗಿವೆ. ಎರಡು ವರ್ಷದಲ್ಲಿ ಹೇಗೆ ಕಾಡು ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದರು.
ಹಸಿರಿನ ಪ್ರಮಾಣದ ಬಗ್ಗೆ, ಕಾಡಿನ ಪ್ರದೇಶ ವಿಸ್ತರಿಸಿರುವ ಬಗ್ಗೆ ಈ ವರದಿ ಸರಿಯಾಗಿಲ್ಲ. ಪರಿಸರ ಇಲಾಖೆಯ ಅಧಿಕಾರಿಗಳ ಯಾವಾಗ ಗಿಡ ನೆಟ್ಟರು, ಯಾವಾಗ ಬೆಳೆಸಿದರು ಎಂಬ ವಿವರಣೆ ಬೇಕು. ಎರಡು ವರ್ಷದಲ್ಲಿ ಈ ಕಾಡು ಬೆಳೆದಿರುವ ಬಗ್ಗೆ ನಂಬಲು ಸಾಧ್ಯವಿಲ್ಲ ಎಂದು ಸುರೇಶ್ ಹೆಬ್ಳೀಕರ್ ತಿಳಿಸಿದರು.
ಗಿಡ ಹಾಕಿರುವ ಲೆಕ್ಕ ಕೊಡಿ- ಯಲ್ಲಪ್ಪ ರೆಡ್ಡಿ
ನಗರದಲ್ಲಿ ದಿನಾ ಮರ ಕಡಿಯುವುದೇ ಹೆಚ್ಚಾಗಿದೆ. ಯಾವ ಆಧಾರದಲ್ಲಿ ಬೆಂಗಳೂರಲ್ಲಿ ಮರ ಹೆಚ್ಚಾಗಿದೆ ಅಂತಾರೆ. ಈ ವರದಿಯನ್ನು ಸಣ್ಣ ಮಗು ಕೂಡಾ ನಂಬಲು ಸಾಧ್ಯವಿಲ್ಲ. ಇಲಾಖೆ ಎಷ್ಟು ಗಿಡ ಹಾಕಿದ್ದಾರೆ. ಬದುಕಿರೋ ಗಿಡಗಳೆಷ್ಟು ಎಂಬ ಬಗ್ಗೆ ಮಾಹಿತಿ ಬೇಕು ಎಂದು ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಈಟಿವಿ ಭಾರತ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎಯೂ ಮೂರೂ ಇಲಾಖೆಯೂ ಗಿಡ ಹಾಕಿಲ್ಲ. ಅರಣ್ಯ ಹೆಚ್ಚಾಗಿದ್ದರೆ ಈ ವರ್ಷ ಅತಿಹೆಚ್ಚು ನೆರೆ- ಬರ ಪರಿಸ್ಥಿತಿ ಬರುತ್ತಿರಲಿಲ್ಲ. ದಿನೆ ದಿನೇ ಉಷ್ಣಾಂಶ, ಹೆಚ್ಚಾಗುತ್ತಿರಲಿಲ್ಲ. ಕಾಡು ಹೆಚ್ಚಾದರೂ ರಾಜ್ಯದಲ್ಲಿ ನೆರೆ ಯಾಕೆ ಹೆಚ್ಚಾಯ್ತು, ಬರ ಹೆಚ್ಚಾಯ್ತು ಎಂದು ಅವರು ಪ್ರಶ್ನಿಸಿದರು. ಸರ್ಕಾರ ಒಳ್ಳೆ ಕೆಲಸ ಮಾಡ್ತಿದೆ ಎಂದು ಬಿಂಬಿಸಲು ಈ ಲೆಕ್ಕಾಚಾರ ನೀಡ್ತಿದೆ. ಈ ವರದಿ ಸಂಪೂರ್ಣ ನಂಬಲು ಅಸಾಧ್ಯ ಎಂದರು.