ಬೆಂಗಳೂರು: ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿರುವ ಹಾಗೂ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ರಕ್ಷಣೆಗೆ "ಸಾಕ್ಷಿಗಳ ರಕ್ಷಣಾ ಯೋಜನೆ- 2018" ಅನ್ನು ಜಾರಿಗೆ ತರುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, "ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವಿಶೇಷ ನ್ಯಾಯಾಲಯ"ದಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿ ಸಹಜವಾಗಿ ಸಾಕ್ಷಗಳನ್ನು ಬೆದರಿಸುವ ಸಾಧ್ಯತೆ ಇರುತ್ತವೆ. ಅದರಿಂದ ಸಾಕ್ಷಿಗಳ ರಕ್ಷಣೆಗೆ ಜಾರಿಗೆ ತರಲಾಗಿರುವ " ಸಾಕ್ಷಿಗಳ ರಕ್ಷಣೆ ಯೋಜನೆ- 2018" ಅನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಯೋಜನೆಯನ್ನು ಜಾರಿಗೊಳಿಸಲು 'ನಿಧಿ' ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಮೊದಲಿಗೆ ಬೆಂಗಳೂರು ನಗರ ಜಿಲ್ಲಾ ಸಕ್ಷಮ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಬೇಕು. ನಂತರ ಉಳಿದ ಜಿಲ್ಲೆಗಳಿಗೂ ಆದೇಶ ಹೊರಡಿಸಬೇಕು. ಯಾವುದೇ ಸಾಕ್ಷಿಗೆ ರಕ್ಷಣೆ ಅಗತ್ಯವಿದೆಯೆಂದು ನ್ಯಾಯಾಲಯದ ಗಮನಕ್ಕೆ ಬಂದರೆ ಸೂಕ್ತ ರಕ್ಷಣೆಗೆ ನ್ಯಾಯಾಧೀಶರು ಸೂಚಿಸಬಹುದು ಎಂದು ನಿರ್ದೇಶಿಸಿತು.
ಇದೇ ವೇಳೆ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಎರಡನೇ ವಿಶೇಷ ನ್ಯಾಯಾಲಯ ಸ್ಥಾಪಿಸುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಐಟಿ, ಸಿಬಿಐ ಸೇರಿದಂತೆ ಕೇಂದ್ರಸರ್ಕಾರದ ತನಿಖಾ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿದೆ.