ಬೆಂಗಳೂರು: ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಕೆಎಎಸ್ ಹಿರಿಯ ಅಧಿಕಾರಿ ಎಲಿಷಾ ಆಂಡ್ರೂಸ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯಲ್ಲಿ ಉಪಕಾರ್ಯದರ್ಶಿ-3 ಹುದ್ದೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಎಲಿಷಾ ಆಂಡ್ರೂಸ್ ಅವರು ಎಂಜಿನಿಯರ್‌ಗಳಿಗೆ ಬಡ್ತಿ ನೀಡುವ ವಿಚಾರದಲ್ಲಿ ಬಾಹ್ಯ ಫಲಾಪೇಕ್ಷೆಯಿಂದ ಕಾರ್ಯನಿರ್ವಹಿಸಿರುವುದು ಹಾಗೂ ಹಿರಿಯ ಅಧಿಕಾರಿಗಳು ಸತತ ನಿರ್ದೇಶನ ನೀಡಿದ್ದರೂ ಕಡತ ವಿಲೇವಾರಿ ಮಾಡದೆ ದುರ್ವರ್ತನೆ, ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಎಲಿಷಾ ಆಂಡ್ರೂಸ್ ಬಿಬಿಎಂಪಿ ಎಂಜಿನಿಯರ್ಗಳ ಬಡ್ತಿಗೆ 4.5 ಕೋಟಿ ರೂ. ಲಂಚ ಕೇಳಿದ್ದ ಆರೋಪ ಎದುರಿಸುತ್ತಿದ್ಧಾರೆ. ಜೊತೆಗೆ ಮೇಲಧಿಕಾರಿಗಳ ನಿರ್ದೇಶನವನ್ನು ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಕಡತ ವಿಲೇವಾರಿ ವಿಳಂಬ ಮಾಡಿದ ಆರೋಪವೂ ಇವರ ಮೇಲಿದೆ. ಎಲಿಷಾ ಅಂಡ್ರೂಸ್ ಅವರು ಇದುವರೆಗೂ ಲಂಚದ ಆರೋಪಕ್ಕೆ ಉತ್ತರ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದ್ದು, ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.
ಇದನ್ನೂ ಓದಿ: 'ಸರಿಯಾದ ಪರಿಹಾರ ಕೊಡಲಿ ಇಲ್ಲವೇ ನಮ್ಮ ಸಮಾಧಿಗಳ ಮೇಲೆ ಕಾಮಗಾರಿ ನಡೆಸಲಿ'