ಬೆಂಗಳೂರು: ಮುಂದಿನ ತಿಂಗಳಿಂದ ರಾಜ್ಯದ ಗ್ರಾಹಕರಿಗೆ ಮತ್ತೆ ವಿದ್ಯುತ್ ಬೆಲೆ ಏರಿಕೆಯ ಬರೆ ಬೀಳಲಿದೆ. ರಾಜ್ಯದ ಜನರಿಗೆ ಇದೀಗ ಅಕ್ಟೋಬರ್ ತಿಂಗಳಿಂದ ಮತ್ತೆ ವಿದ್ಯುತ್ ದರ ಏರಿಕೆ ಮೂಲಕ ಜೇಬಿಗೆ ಕತ್ತರಿ ಬೀಳಲಿದೆ. ಇದೇ ಸೆಪ್ಟೆಂಬರ್ 19ರಂದು ಕೆಇಆರ್‌ಸಿ ಈ ಸಂಬಂಧ ಆದೇಶ ಹೊರಡಿಸಿದ್ದು, ಎಸ್ಕಾಂಗಳಿಗೆ ಇಂಧನ ವೆಚ್ಚ ಹೊಂದಾಣಿಕೆ (FAC) ಶುಲ್ಕವನ್ನು ಗ್ರಾಹರಿಂದ ವಸೂಲಿ ಮಾಡಲು ಅನುಮತಿ ನೀಡಿದೆ. ಅದರಂತೆ ಗ್ರಾಹಕರಿಂದ ಎಸ್ಕಾಂಗಳಿಗೆ ಅಕ್ಟೋಬರ್ 1, 2022ರಿಂದ ಮಾರ್ಚ್ 31, 2023ರವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಮುಂದಿನ ಆರು ತಿಂಗಳ ಅವಧಿಯಲ್ಲಿ ಬೆಸ್ಕಾಂಗೆ ಪ್ರತಿ ತಿಂಗಳು ಪ್ರತಿ ಯೂನಿಟ್ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆ ಹಾಗು ಗುಸ್ಕಾಂಗೆ 35 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿಯಾಗಿ 43 ರೂ. ನಿಂದ 24 ರೂ. ವರೆಗೆ ಪಾವತಿಸಬೇಕಾಗಿದೆ.
ಈ ಮುಂಚೆ ಜುಲೈ 1, 2022ರಿಂದ ಡಿಸೆಂಬರ್ 31, 2022ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿತ್ತು. ಆಗ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿಯಾಗಿ 19 ರೂ. ನಿಂದ 31 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆ ಬರೆ ಬಿದ್ದಿದೆ.
ಏನಿದು ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ?: ಇಂಧನ ವೆಚ್ಚ ಹೊಂದಾಣಿಕೆ (FAC) ಶುಲ್ಕ. ಇಂಧನ ಖರೀದಿ ವೆಚ್ಚ ಹಾಗೂ ವಿದ್ಯುತ್ ಉತ್ಪಾದಿಸಿ ಪೂರೈಸುವ ನಿಗಮಗಳು ವಿಧಿಸುವ ದರವನ್ನು ಎಸ್ಕಾಂಗಳು ಲೆಕ್ಕಮಾಡುತ್ತವೆ. ವಿದ್ಯುತ್ ವೆಚ್ಚ ಹೆಚ್ಚಾದಾಗ ಅದನ್ನು ಎಸ್ಕಾಂಗಳು ಗ್ರಾಹಕರಿಂದ ವಸೂಲಿ ಮಾಡುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಈ ವೆಚ್ಚ ಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ನಿಯಮದಲ್ಲಿ 2013ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ವಿದ್ಯುತ್ ಖರೀದಿ ವೆಚ್ಚದ ಆಧಾರದಲ್ಲಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ನಿಗದಿ ಮಾಡಿಕೊಡಲಾಗುತ್ತದೆ.
ಗ್ರಾಹಕರಿಗೆ ವಿಧಿಸಬೇಕಾದ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕದ ಪ್ರಸ್ತಾವನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್ಸಿಗೆ ಎಸ್ಕಾಂಗಳು ಸಲ್ಲಿಸುತ್ತವೆ. ಕೆಇಆರ್‌ಸಿ ಸಭೆ ಸೇರಿ ಪ್ರಸ್ತಾವನೆಯನ್ನು ವಿಸ್ತೃತವಾಗಿ ಚರ್ಚಿಸಿದ ಬಳಿಕ ಪ್ರತಿ ಯೂನಿಟ್ಗೆ ಗ್ರಾಹಕರಿಂದ ಎಸ್ಕಾಂಗಳು ಸಂಗ್ರಹಿಸಬೇಕಾದ ಶುಲ್ಕ ನಿಗದಿಪಡಿಸುತ್ತದೆ.
ಕಲ್ಲಿದ್ದಲು ದರ ಗಣನೀಯ ಹೆಚ್ಚಳವಾಗಿದ್ದು, ವಿದ್ಯುತ್ ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ. ಹೀಗಾಗಿ, ಈ ವೆಚ್ಚ ಹೆಚ್ಚಳವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು.
ಇದನ್ನೂ ಓದಿ: ಎಸ್ಕಾಂಗಳ ಬಲವರ್ಧನೆಗೆ ಕೇಂದ್ರದ ಅನುದಾನ ಗಿಟ್ಟಿಸಿಕೊಳ್ಳುವುದೇ ರಾಜ್ಯ ಸರ್ಕಾರಕ್ಕೆ ಕಗ್ಗಂಟು! ಏನಿದು ಸಂಕಷ್ಟ?!