ಬೆಂಗಳೂರು: ನಾಳೆ ಬೆಳಗ್ಗೆ ಏಳು ಗಂಟೆಯಿಂದ ಆರ್. ಆರ್. ನಗರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಇದರಿಂದಾಗಿ ಚುನಾವಣಾ ಸಿಬ್ಬಂದಿಗಳು ಇಂದೇ ಮತಗಟ್ಟೆಗಳಿಗೆ ಇವಿಎಮ್, ವಿವಿ ಪ್ಯಾಟ್ ಗಳೊಂದಿಗೆ ತೆರಳಿದ್ದಾರೆ. ಅದೇ ರೀತಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಮಂಜುನಾಥ್ ಪ್ರಸಾದ್ ಜ್ಞಾನಾಕ್ಷಿ, ವಿದ್ಯಾನಿಕೇತನ್ ಶಾಲೆಯ ಮಸ್ಟರಿಂಗ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ 678 ತಂಡಗಳಲ್ಲಿ ಸಿಬ್ಬಂದಿಗಳು ಬಂದು ಮತ ಯಂತ್ರಗಳನ್ನು ತೆಗೆದುಕೊಂಡು ಮತಗಟ್ಟೆಗಳಿಗೆ ತೆರಳುತ್ತಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ಶೇ.ಇಪ್ಪತ್ತರಷ್ಟು ಚುನಾವಣಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಚಾರ ವ್ಯವಸ್ಥೆಗೆ 180 ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಇದರಲ್ಲಿ ಈಗ ಚುನಾವಣಾ ಸಾಮಗ್ರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿ ಮತಗಟ್ಟೆಗೆ ತೆರಳಿರುವ ಸಿಬ್ಬಂದಿ ಇಂದು ರಾತ್ರಿ ಅದೇ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡಲಿದ್ದು, ಬೆಳಗ್ಗೆ ಆರು ಗಂಟೆಗೆ ಮತಗಟ್ಟೆ ತೆರೆಯಲಿದ್ದಾರೆ. ಪೋಲಿಂಗ್ ಏಜೆಂಟ್ಗಳಿಗೂ ಬೆಳಗ್ಗೆ ಆರು ಗಂಟೆಗೆ ಬರಲು ತಿಳಿಸಿದ್ದು, ಅವರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಬೆಳಗ್ಗೆ ಏಳುಗಂಟೆಗೆ ಮತದಾನ ಆರಂಭವಾಗಿ ಸಂಜೆ ಆರು ಗಂಟೆವರೆಗೆ ಮುಗಿಯಲಿದೆ ಎಂದರು.
ಕೋವಿಡ್ ರೋಗಿಗಳಿಗೆ ಮತದಾನ ಮಾಡಲು ಸಂಜೆ 5 ರಿಂದ 6 ರವರೆಗೆ ವ್ಯವಸ್ಥೆ ಇರಲಿದೆ. ಆದರೆ ಯಾರೂ ಉತ್ಸಾಹ ತೋರಿಸುತ್ತಿಲ್ಲ. ಯಾವುದೇ ಮತದಾರರು ಆರುಗಂಟೆ ಒಳಗೆ ಬಂದರೆ ಮತದಾನಕ್ಕೆ ಅವಕಾಶ ಕೊಡಲಾಗುತ್ತದೆ. ಮತಗಟ್ಟೆಯಲ್ಲಿ 678 ಆರೋಗ್ಯ ಇಲಾಖೆಯ ಸಿಬ್ಬಂದಿ ಇರಲಿದ್ದು, ಥರ್ಮಲ್ ಸ್ಕ್ರೀನಿಂಗ್, ಬಲಗೈಗೆ ಹ್ಯಾಂಡ್ ಗ್ಲೌಸ್ ಕೊಡಲಿದ್ದಾರೆ. ಎಡಗೈ ಮಧ್ಯದ ಬೆರಳಿಗೆ ಇಂಕ್ ಹಾಕಲಿದ್ದಾರೆ ಎಂದ ಅವರು, ನಾಳೆ ಶಾಂತಿಯುತ ಮತದಾನ ನಡೆಯಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಜನಸಂದಣಿಯಾಗಿತ್ತು. ಹಾಗಾಗಿ ನಾಳೆ ಚುನಾವಣೆ ಮುಗಿದ ಬಳಿಕ ಕೋವಿಡ್ ಸೋಂಕು ಪರೀಕ್ಷೆ ಹೆಚ್ಚು ಮಾಡಲಾಗುವುದು. ದಿನಕ್ಕೆ 60-80 ಪ್ರಕರಣ ಬರುತ್ತಿದೆ. ಹೀಗಾಗಿ, ಸೋಂಕು ಪರೀಕ್ಷೆ ಹೆಚ್ಚು ಮಾಡಲಾಗುವುದು ಎಂದ ಅವರು, ಹೆಚ್ಚುವರಿ ಸಿಬ್ಬಂದಿಗಳು ಇರುವುದರಿಂದ ಯಾರೇ ಸಮಸ್ಯೆಗಳಿಂದಾಗಿ ವಿನಾಯಿತಿಗಳನ್ನು ಕೇಳಿದರೆ ಅವಕಾಶ ನೀಡಲಾಗುವುದು ಎಂದರು.