ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ನೀಡುವ ಭರವಸೆಗಳು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123 ರಡಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರದ ವ್ಯಾಪ್ತಿಗೆ ಬರುವದಿಲ್ಲ. ಅಷ್ಟಕ್ಕೂ ಈ ಭರವಸೆಗಳು ವ್ಯಕ್ತಿಗತವಾಗಿರುವುದಿಲ್ಲ. ಅದು ಇಡೀ ಪಕ್ಷಕ್ಕೆ ಸಂಬಂಧಿಸಿದ್ದು ಎಂದು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೈಕೋರ್ಟ್‌ಗೆ ವಿವರಣೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಆ ಮೂಲಕ ಚುನಾವಣಾ ಅಕ್ರಮ ಎಸಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಶಶಾಂಕ ಜೆ. ಶ್ರೀಧರ್ ಎಂಬವರು ಚುನಾವಣೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ, ಪ್ರತಿವಾದಿ ಆಗಿರುವ ಜಮೀರ್ ಅಹ್ಮದ್ಪರ ವಕೀಲ ಇಸ್ಮಾಯಿಲ್ ಜಬಿವುಲ್ಲಾ ಆಕ್ಷೇಪಣೆ ಸಲ್ಲಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದಾರೆ.
ವಿಚಾರಣೆ ವೇಳೆ ಪ್ರತಿವಾದಿ ಜಮೀರ್ ಅಹ್ಮದ್ ಪರ ವಕೀಲರು, ಸುದೀರ್ಘ 70 ಪುಟಗಳ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೂ, ಅದರಲ್ಲಿ ಅರ್ಜಿದಾರರು ಮಾಡಿರುವ ಎಲ್ಲ ಆರೋಪಗಳನ್ನು ಅಲ್ಲಗಳೆಯಲಾಗಿದೆ. ಅಲ್ಲದೇ ಸೂಕ್ತ ಸಾಕ್ಷಿ-ಪುರಾವೆ ಮತ್ತು ದಾಖಲೆಗಳಿಲ್ಲದೆ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಯಾವ ಹಂತದಲ್ಲೂ ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲ. ಅರ್ಜಿದಾರರ ಯಾವ ಮನವಿಯನ್ನೂ ನ್ಯಾಯಾಲಯ ಪರಿಗಣಿಸಬಾರದು ಎಂದು ಕೋರಿದರು.
ಐದು ಗ್ಯಾರಂಟಿಗಳ ಹೊರತಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳು ಅನೇಕ ದಾರ್ಶನಿಕರ ತತ್ವಗಳಿಂದ ಪ್ರೇರೇಪಿತಗೊಂಡಿವೆ. ಕಾಂಗ್ರೆಸ್ ಸರ್ಕಾರ ವಿಶ್ವಗುರು ಬಸವಣ್ಣ, ರಾಷ್ಟ್ರಕವಿ ಕುವೆಂಪು, ಬ್ರಹ್ಮಶ್ರೀ ನಾರಾಯಣಗುರು, ದಾಸ ಶ್ರೇಷ್ಠರಾದ ಪುರಂದರದಾಸ, ಕನಕದಾಸ, ಸಂತ ಶಿಶುನಾಳ ಶರೀಫ ಮತ್ತಿತರ ನಾಡಿನ ಶ್ರೇಷ್ಠ ದಾರ್ಶನಿಕರ ಮೌಲ್ಯ ಹಾಗೂ ತತ್ವಗಳನ್ನು ಅಳವಡಿಸಿಕೊಂಡಿದೆ.
ಅರ್ಜಿದಾರರು ಆರೋಪಿಸಿರುವಂತೆ ಚುನಾವಣೆ ಪ್ರಣಾಳಿಕೆ ವ್ಯಕ್ತಿಗತವಾಗಿರುವುದಿಲ್ಲ. ಅದು ಇಡೀ ಪಕ್ಷಕ್ಕೆ ಸಂಬಂಧಿಸಿದ್ದು, ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123ರ ಚುನಾವಣಾ ಅಕ್ರಮ ಅಥವಾ ಭ್ರಷ್ಟಾಚಾರದ ಅರ್ಥವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಪಾದಿಸಲಾಗಿದೆ.
ಈ ಲಿಖಿತ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಇದಕ್ಕೆ ಪ್ರತ್ಯುತ್ತರ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅ.11ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಣಾ ನೇಸರ್ಗಿ ವಾದ ಮಂಡಿಸಿದರು.
ಇದನ್ನೂಓದಿ: ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ಪತಿ ಜೀವನಾಂಶ ನೀಡಲಾಗದು: ಹೈಕೋರ್ಟ್