ಬೆಂಗಳೂರು : ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಿರುವ ಚುನಾವಣಾ ಆಯೋಗವು ಬುಧವಾರ ಒಂದೇ ದಿನದಲ್ಲಿ 2.85 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 89.01 ಲಕ್ಷ ರೂ. ನಗದು, ತೇರದಾಳ ಕ್ಷೇತ್ರದಲ್ಲಿ 70 ಲಕ್ಷ ರೂ. ಮತ್ತು ತುರುವೇಕೆರೆ ಕ್ಷೇತ್ರದಲ್ಲಿ 31.88 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ 3.94 ಕೋಟಿ ರೂ. ಮೌಲ್ಯದ 7.881 ಕೆಜಿ ಚಿನ್ನ, 2.22 ಕೋಟಿ ರೂ. ಮೌಲ್ಯದ 3.993 ಕೆಜಿ ಕಚ್ಚಾ ಚಿನ್ನ , 6.48 ಲಕ್ಷ ರು. ಮೌಲ್ಯದ 735 ಗ್ರಾಂ ವಜ್ರ ಲೇಪಿತ ಚಿನ್ನ ಮತ್ತು 6.39 ಲಕ್ಷ ರೂ.ಮೌಲ್ಯದ 10.887 ಕೆಜಿ ಕಚ್ಚಾ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಆದ ಬಳಿಕ ಈವರೆಗೆ ಒಟ್ಟು 115.96 ಕೋಟಿ ರೂ. ನಗದು, 22.36 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ.
76.07 ಕೋಟಿ ರೂ. ಮೌಲ್ಯದ 20.29 ಲಕ್ಷ ಲೀಟರ್ ಮದ್ಯ, 21.37 ಕೋಟಿ ರೂ. ಮೌಲ್ಯದ 1,689 ಕೆಜಿ ಮಾದಕ ವಸ್ತುಗಳು, 82.77 ಕೋಟಿ ರೂ. ಮೌಲ್ಯದ 162.26 ಕೆಜಿ ಚಿನ್ನ, 4.54 ಕೋಟಿ ರೂ. ಮೌಲ್ಯದ 656.13 ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು 87.32 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 323.09 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಇನ್ನು, 2,514 ಎಫ್‌ಐಆರ್, 69,847 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,583 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 10,297 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 15,944 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಮಾರ್ಚ್ 29 ರಿಂದ ನೀತಿ ಸಂಹಿತೆ ಜಾರಿ: ದೇಶದಲ್ಲಿ ಮತ್ತು ಯಾವುದೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದಾಗ ಚುನಾವಣಾ ನೀತಿ ಸಂಹಿತೆಯೂ ಘೋಷಣೆಯಾಗುತ್ತದೆ. ಚುನಾವಣೆ ಫಲಿತಾಂಶ ಹೊರಬೀಳುವ ತನಕ ರಾಜಕೀಯ ನಾಯಕರು, ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯಿಗೆ ಸಂಬಂಧಿಸಿದ ಎಲ್ಲರೂ ನೀತಿ ಸಂಹಿತೆಗೆ ಬದ್ಧರಾಗಿರಬೇಕು. ಚುನಾವಣಾ ಸಂದರ್ಭಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಜಾರಿಗೊಳಿಸುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆ ಮಾರ್ಚ್ 29 ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ.
ಇದನ್ನೂ ಓದಿ : ಚುನಾವಣಾ ಅಕ್ರಮ: ಈವರೆಗೆ 309 ಕೋಟಿ ರೂ.ಮೌಲ್ಯದ ವಸ್ತುಗಳು ಜಪ್ತಿ