ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿರುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತಕುಮಾರ್ ಅವರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ದಿ. ಅನಂತಕುಮಾರ್ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ನಿಯೋಜಿತ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಲಾಲ್ ಬಾಗ್ ವೆಸ್ಟ್ಗೇಟ್ನಿಂದ ಅದಮ್ಯಚೇತನದವರೆಗೆ ಆಯೋಜಿಸಿದ್ದ 4ನೇ 'ಅನಂತ ಸ್ಮೃತಿ' ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ ಎಂದು ಬಣ್ಣಿಸಿದರು.
![ananth kumar](https://etvbharatimages.akamaized.net/etvbharat/prod-images/12-11-2023/kn-bng-03-byv-anantha-nadige-script-7208080_12112023193044_1211f_1699797644_751.jpg)
ಇವರಿಬ್ಬರ ನಡುವೆ ಅವಿನಾಭಾವ ಸಂಬಂಧವಿತ್ತು. ಬೆಂಗಳೂರಿನ ಶಾಂತಿನಗರ ನಿವಾಸದಲ್ಲಿ ಹಗಲಿರುಳು ಜನಪರ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಅನಂತಕುಮಾರ್ ಅವರು ಮನೆಗೆ ಬಂದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಅಧಿಕೃತ ಪ್ರವಾಸ, ಕಾರ್ಯಕ್ರಮಗಳನ್ನು ಮರೆಯುತ್ತಿದ್ದರು. ಇಲ್ಲವೇ ಮುಂದೂಡುತ್ತಿದ್ದರು. ಇಬ್ಬರೂ ಹಗಲಿರುಳು ಪಕ್ಷದ ಬೆಳವಣಿಗೆಯನ್ನೇ ಧ್ಯಾನಿಸುತ್ತಿದ್ದರು. ಬಿಜೆಪಿಗೆ ರಾಜ್ಯದಲ್ಲಿ ಭದ್ರ ಬುನಾದಿ ದೊರೆಯಲು ಈ ನಾಯಕರೇ ಕಾರಣ ಎಂದು ಹೇಳಿದ್ದಾರೆ.
ತೇಜಸ್ವಿನಿ ಅನಂತಕುಮಾರ್ ಅವರ ಕ್ರಿಯಾಶೀಲತೆ ಮಾದರಿಯಾಗಿದ್ದು, ಅವರು ಎಂದೂ ಮನೆಯಲ್ಲಿ ಸುಮ್ಮನೆ ಕುಳಿತವರೇ ಅಲ್ಲ. ಅನಂತಕುಮಾರ್ ಅವರ ತಾಯಿ ಹೆಸರಿನಲ್ಲಿ ತೇಜಸ್ವಿನಿ ಅನಂತಕುಮಾರ್ ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿ, ಹಸಿದವರಿಗೆ ಅನ್ನದಾಸೋಹದ ಸೇವೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಪ್ರತಿಯೊಂದು ಸೇವೆಯಲ್ಲಿ ರಾಜಕೀಯ ಲಾಭ ನೋಡುತ್ತಾರೆ. ಆದರೆ, ತೇಜಸ್ವಿನಿ ಅನಂತಕುಮಾರ್ ಅವರು ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ, ತಮ್ಮ ಸೇವೆ ಮೂಲಕ ಪ್ರೇರಣೆಯಾಗಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
![ananth kumar](https://etvbharatimages.akamaized.net/etvbharat/prod-images/12-11-2023/kn-bng-03-byv-anantha-nadige-script-7208080_12112023193044_1211f_1699797644_496.jpg)
ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿ ನಗರಕ್ಕೆ ಹೊಸ ಸ್ವರೂಪ, ಅಭಿವೃದ್ಧಿಗೆ ಹೊಸ ಬೆಳಕು ನೀಡಿದ್ದರು. ಅನಂತಕುಮಾರ್ ಅವರ ನೇತೃತ್ವ, ಕತೃತ್ವವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರಾಜ್ಯ ಬಿಜೆಪಿಗೆ ಬಿ ವೈ ವಿಜಯೇಂದ್ರ ನೂತನ ಸಾರಥಿಯಾಗಿದ್ದು, ಹೊಸ ಗಾಳಿ ಬೀಸುವಂತಾಗಿದೆ. ಬದಲಾವಣೆಗೆ ಇದು ನಾಂದಿಯಾಗಲಿದ್ದು, ಪಕ್ಷಕ್ಕೆ ಶಕ್ತಿ ಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ತೇಜಸ್ವಿನಿ ಅನಂತ್ ಕುಮಾರ್, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ. ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಪಿ. ವಿ. ಕೃಷ್ಣ ಭಟ್ ಮತ್ತಿರರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ: ಬಿ.ವೈ ವಿಜಯೇಂದ್ರ