ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಗುಣಮುಖಳಾಗಿರುವ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ ಮನೆಗೆ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.
ಆಕೆಯ ಮನೆಗೆ ಶಿಕ್ಷಕರನ್ನು ಕಳುಹಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆಗೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿಮ್ಹಾನ್ಸ್ನಲ್ಲಿ ಆ ವಿದ್ಯಾರ್ಥಿನಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಸಚಿವರು ಇಲಾಖೆಯ ನೆರವು ವಿಸ್ತರಿಸಲು ಕ್ರಮ ವಹಿಸಿದ್ದರು.
ಕುಂಬಳಗೂಡಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಜನವರಿ 25ರಂದು ರಾಷ್ಟ್ರೀಯ ಮಟ್ಟದ ಪ್ರತಿಭಾ ಅನ್ವೇಷಣಾ ಪರೀಕ್ಷೆಗೆ ಹಾಜರಾಗಲು ತಂದೆಯೊಂದಿಗೆ ಹೋಗುತ್ತಿದ್ದಾಗ ಕೆಂಗೇರಿ ಬಳಿ ರಸ್ತೆ ಅಪಘಾತ ಸಂಭವಿಸಿತ್ತು. ಪರಿಣಾಮ ಕುತ್ತಿಗೆ ಹಿಂಭಾಗದ ಮೂಳೆ ಮತ್ತು ಬಲಗೈಗೆ ತೀವ್ರವಾಗಿ ಪೆಟ್ಟಾಗಿತ್ತು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಎರಡು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಬಾಲಕಿಗೆ ತನ್ನ ಕತ್ತು ತಿರುಗಿಸಲು ಇನ್ನೂ ಸುಮಾರು ಮೂರು ವಾರಗಳು ಬೇಕಿದೆ. ಬಲಗೈ ಎತ್ತಲು ಸಹ ಕಷ್ಟವಾಗುತ್ತಿದ್ದು, ಚೇತರಿಸಿಕೊಳ್ಳಲು ಸುಮಾರು ಬೇಕಾಗುತ್ತದೆ. ಇನ್ನು ಶಿಕ್ಷಣ ಇಲಾಖೆಯಿಂದ ಆಕೆಯ ಶಸ್ತ್ರ ಚಿಕಿತ್ಸೆಗೆ ಅಗತ್ಯ ಹಣವನ್ನು ಪಾವತಿ ಮಾಡಲಾಗಿದೆ.
ಇನ್ನು ಮುಂದೆಯೂ ಸಹ ಪಾಠ ಕಲಿಯಲು ಬೇಕಾದ ಎಲ್ಲ ಸಹಾಯ ನೀಡಲಾಗುತ್ತದೆ. ಪೂರ್ಣ ಗುಣಮುಖವಾಗುವವರೆಗೆ ಮನೆಯಲ್ಲೇ ಶಾಲಾ ಶಿಕ್ಷಕರು ಪಾಠ ಹೇಳಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.