ಬೆಂಗಳೂರು: ಲೋಪದೋಷಗಳ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆ ನೇಮಕಾತಿ ಕುರಿತು ಪ್ರಕಟಿಸಲಾಗಿರುವ ಹೆಚ್ಚುವರಿ ಪಟ್ಟಿಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪಿಯು ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿಯ ಹೆಚ್ಚುವರಿ ಪಟ್ಟಿಯಲ್ಲಿನ ಆಯ್ಕೆಯ ಕುರಿತು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ, ನನಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಆಗಸ್ಟ್ 22ರಂದು ಪ್ರಕಟಿಸಿರುವ ಪಟ್ಟಿಯನ್ನು ಹಿಂಪಡೆದಿದ್ದು, ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಿದೆ ಎಂದಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ನೇಮಕಾತಿ ಕುರಿತು ಹೆಚ್ಚುವರಿ ಪಟ್ಟಿಯಲ್ಲಿನ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಆಗಸ್ಟ್ 22ರಂದು ಪ್ರಕಟಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ನ್ಯೂನತೆಗಳಿವೆ ಎಂದು ಕೆಲ ಅಭ್ಯರ್ಥಿಗಳು ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು. ಇದನ್ನು ಪರಿಗಣಿಸಿದ ಸಚಿವರು ಇಲಾಖೆಯಿಂದ ಪ್ರಕಟಿಸಿರುವ ಪಟ್ಟಿಯನ್ನು ಮರುಪರಿಶೀಲಿಸಲು ನಿರ್ದೇಶಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾದ ಮೀಸಲಾತಿ ಗುಂಪನ್ನು ಯಥಾವತ್ತಾಗಿ ಪರಿಗಣಿಸಲಾಗಿದ್ದು, ನ್ಯೂನ್ಯತೆಯನ್ನು ಸರಿಪಡಿಸಲು ಆಗಸ್ಟ್ 22ರಂದು ಪ್ರಕಟಿಸಲಾಗಿರುವ ಪಟ್ಟಿಯನ್ನು ಹಿಂಪಡೆಯಲಾಗಿದೆ. ಕರಡು ಪರಿಷ್ಕೃತ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ, ನಂತರ ಅಂತಿಮಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ನಮ್ ಸರ್ಕಾರದಲ್ಲಿ ಯಾವ ಕಮಿಷನ್ನೂ ಇರ್ಲಿಲ್ಲ, ಇದ್ರೆ ತನಿಖೆ ಮಾಡಿಸಲಿ: ಡಿಕೆಶಿ