ಬೆಂಗಳೂರು: ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ ಹಾಗೂ ರಾಜ್ಯ ಪಠ್ಯಕ್ರಮದಿಂದ ಕೇಂದ್ರ ಪಠ್ಯಕ್ರಮದ ಸಂಯೋಜನೆಗೆ ನಿರಾಕ್ಷೇಪಣಾ ಪತ್ರ (NOC) ಮಂಜೂರಾತಿ ಪ್ರಕ್ರಿಯೆ ಸರಳೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಸಿ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ ನವೀಕರಣ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ. ಅತ್ಯಂತ ಕಡಿಮೆ ಹಂತಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುತ್ತಿದೆ. ನೋಂದಣಿ, ನವೀಕರಣ ಮುಂತಾದ ಎಲ್ಲ ಪ್ರಕ್ರಿಯೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಇನ್ನಷ್ಟು ಸುಧಾರಿತ ರೀತಿಯಲ್ಲಿ ಎಲ್ಲ ಸೇವೆಗಳು ಶೀಘ್ರದಲ್ಲಿಯೇ ಆನ್‌ಲೈನ್ ಮೂಲಕ ಲಭ್ಯವಾಗಲಿವೆ. ಕಡಿಮೆ ಸಮಯದಲ್ಲಿ ಹೆಚ್ಚು ಪಾರದರ್ಶಕವಾಗಿ ಸೇವೆಗಳು ಲಭ್ಯವಾಗುತ್ತವೆ. ಈ ಕುರಿತಾದ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದು ಸಚಿವ ನಾಗೇಶ್ ಅವರು ತಿಳಿಸಿದ್ದಾರೆ.
ಶಿಕ್ಷಕರ ವೇತನಾನುದಾನ ಬಿಡುಗಡೆ ಕುರಿತು ಸಿಎಂ ಜತೆ ಮಾತುಕತೆ: ಸಿಎಂ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿ, ಶಿಕ್ಷಕರ ವೇತನಾನುದಾನ ಬಿಡುಗಡೆ ಮಾಡುವ ಕುರಿತು ನಿರ್ಧರಿಸುತ್ತೇನೆ. ಬೊಮ್ಮಾಯಿ ಅವರೇ ಹಣಕಾಸು ಸಚಿವರಾಗಿರುವ ಹಿನ್ನೆಲೆ ಮಾತುಕತೆ ನಡೆಸಿ ಶಿಕ್ಷಕರಿಗೆ ನ್ಯಾಯ ಒದಗಿಸುತ್ತೇನೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸದನದಲ್ಲಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ 1986-87 ರಿಂದ 1994-95ನೇ ಸಾಲಿನವರೆಗೆ ಆರಂಭವಾದ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಸರ್ಕಾರದ ಮೇಲೆ ಸರ್ವ ಪಕ್ಷದ ಸದಸ್ಯರು ತೀವ್ರ ಒತ್ತಡ ಹೇರಿದರು. ಈ ವೇಳೆ ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, 1995ಕ್ಕಿಂತ ಮುಂಚಿನ ಶಾಲೆಗಳೇ ಹೆಚ್ಚಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಿರ್ಲಕ್ಷ್ಯ ಆಗಿದೆ. ಶಾಲೆಗಳ ಬಗ್ಗೆ ಕಳಕಳಿ ನಮ್ಮ ಸರ್ಕಾರಕ್ಕೆ ಇದೆ. ಇಲ್ಲವಾಗಿದ್ದರೆ ಸಭೆಯೇ ಆಗುತ್ತಿರಲಿಲ್ಲ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಣ ಬಿಡುಗಡೆ ಆಗಿಲ್ಲ. ಮುಖ್ಯಮಂತ್ರಿಯವರ ಜತೆ ಇಂದೇ ಮಾತುಕತೆ ನಡೆಸಿ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಎಸ್. ವಿ ಸಂಕನೂರು ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆಯಡಿ 1ರಿಂದ 8ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಬೇಕು. ಇಲ್ಲಿ ಕಾರ್ಯನಿರ್ವಹಿಸುವ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಿ. 114 ಶಾಲೆಯಲ್ಲಿ ಶಿಕ್ಷಕರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಸಾಮಾಜಿಕ ಬದ್ಧತೆಯಡಿ ಕಾರ್ಯ ಆಗಬೇಕು. ಈ ಬಗ್ಗೆ ಒಂದು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನೀವು ಆದೇಶ ನೀಡಬೇಕು. ಸರ್ಕಾರ ಶಿಕ್ಷಣಕ್ಕೆ ಮಹತ್ವ ಕೊಟ್ಟಿರುವಾಗ ಈ ಶಾಲೆಗಳನ್ನು ಬಿಟ್ಟಿರುವುದು ಎಷ್ಟು ಸರಿ?. ಯಾವುದಾದರೂ ಯೋಜನೆ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದರು.
ಓದಿ : ಶಿಕ್ಷಕರ ವೇತನಾನುದಾನ ಬಿಡುಗಡೆಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಪ್ರಕಟ: ನಾಗೇಶ್